

ಕೊಕ್ಕಡ: ಜೀವನ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಸಾರುವ, ಸಂಸ್ಕಾರಯುತ ಮತ್ತು ಮೌಲ್ಯಾಧಾರಿತ ಶಿಕ್ಷಣ ನೀಡುವ ಉದ್ದೇಶದಿಂದ ಶ್ರೀ ಮಹಾಗಣಪತಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಪ್ರಾರಂಭಿಸುವ ಕುರಿತು ಮಾಹಿತಿ ಕಾರ್ಯಾಗಾರವು ಅ.11ರಂದು ಸೌತಡ್ಕ ಸೇವಾಧಾಮದ ಸಭಾಂಗಣದಲ್ಲಿ ಟ್ರಸ್ಟ್ ಅಧ್ಯಕ್ಷ ಕೃಷ್ಣ ಭಟ್ ಹಿತ್ತಿಲು ಅವರ ಅಧ್ಯಕ್ಷತೆಯಲ್ಲಿ ಜರಗಿತು.

ಮಾರ್ಗದರ್ಶಕರಾಗಿ ಆಗಮಿಸಿದ ಡಾ.ಕಲ್ಲಡ್ಕ ಪ್ರಭಾಕರ ಭಟ್ ಅವರು ಮಾತನಾಡಿ, ಉದ್ದೇಶಿತ ಶ್ರೀ ಮಹಾಗಣಪತಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಯಾವ ರೀತಿ ಆರಂಭಗೊಳ್ಳಬೇಕು. ಮೌಲ್ಯಾಧಾರಿತ ಶಿಕ್ಷಣವು ಇಂದಿನ ಯುಗದ ಅವಶ್ಯಕತೆ. ಮಕ್ಕಳಲ್ಲಿ ಸಂಸ್ಕಾರ, ರಾಷ್ಟ್ರಭಾವನೆ, ಹಾಗೂ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಬೆಳೆಸುವುದು ನಮ್ಮ ಉದ್ದೇಶ ಎಂದು ಎಂಬ ವಿಷಯವಾಗಿ ಸುತ್ತಮುತ್ತಲಿನ ಗ್ರಾಮದಿಂದ ಆಗಮಿಸಿದ ಜನರಿಗೆ ಮಾಹಿತಿ ನೀಡಿದರು.
ಸುಮಾರು 1.10 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಳ್ಳಲಿರುವ ಈ ಶಾಲೆಯ ಕಾಮಗಾರಿಗೆ ಸಂಬಂಧಿಸಿದಂತೆ ವಾಸ್ತು ತಜ್ಞರ ಸಲಹೆ ಪಡೆದು, ಇಂಜಿನಿಯರ್ ಮೂಲಕ ನಿರ್ಮಾಣ ಕಾರ್ಯ ಆರಂಭಿಸುವ ತಯಾರಿ ನಡೆಯುತ್ತಿದೆ ಅ.24ರಂದು ಶಿಲಾನ್ಯಾಸ ನಡೆಯಲಿದೆ ಎಂದು ಅವರು ತಿಳಿಸಿದರು.
ಶಾಲೆಯಲ್ಲಿ ಎಲ್.ಕೆ.ಜಿ. ಯಿಂದ 10ನೇ ತರಗತಿವರೆಗೆ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗಲಿದ್ದು, ಶೀಘ್ರದಲ್ಲೇ ಪ್ರವೇಶ ಪ್ರಕ್ರಿಯೆ ಪ್ರಾರಂಭಗೊಳ್ಳಲಿದೆ ಎಂದು ಡಾ. ಪ್ರಭಾಕರ್ ಭಟ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಕಟ್ಟಡ ಸಮಿತಿಯ ಅಧ್ಯಕ್ಷ ಹರೀಶ್ ರಾವ್ ಮುಂಡ್ರುಪ್ಪಾಡಿ, ಪಟ್ಟೂರು ಶ್ರೀರಾಮ ಶಾಲೆಯ ಅಧ್ಯಕ್ಷ ಜನಾರ್ಧನ ಕಜೆ, ಹಾಗೂ ಶಾಲಾ ಕಟ್ಟಡ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಹರೀಶ್ ರಾವ್ ಮುಂಡ್ರುಪ್ಪಾಡಿ ಸ್ವಾಗತಿಸಿದರು, ಕೇಶವ ಹಳ್ಳಿಂಗೇರಿ ಕಾರ್ಯಕ್ರಮ ನಿರೂಪಿಸಿದರು, ಬಾಲಕೃಷ್ಣ ನೈಮಿಷ ವಂದಿಸಿದರು.






