

ನೂಜಿಬಾಳ್ತಿಲ: “ಪ್ರೀತಿ, ಕಾಳಜಿ ಮತ್ತು ಕರುಣೆ ಹಂಚೋಣ” ಎಂಬ ಅರ್ಥಪೂರ್ಣ ಶೀರ್ಷಿಕೆಯಡಿ ಮಂಗಳೂರು ವಿಶ್ವವಿದ್ಯಾಲಯ ಘಟಕದ ವಿಶ್ವವಿದ್ಯಾಲಯ ಕಾಲೇಜು ನೆಲ್ಯಾಡಿ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಕಡಬ–ಸುಳ್ಯ ವಲಯ ಸಂಯುಕ್ತ ಆಶ್ರಯದಲ್ಲಿ ನೂಜಿಬಾಳ್ತಿಲ ಬೆಥನಿ ಕಾನ್ವೆಂಟ್ ವೃದ್ಧಾಶ್ರಮದಲ್ಲಿ ಅ.11ರಂದು ಹೃದಯಸ್ಪರ್ಶಿ ವೃದ್ಧಾಶ್ರಮ ಭೇಟಿ ಹಾಗೂ ಸೇವಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮ ಆರಂಭಗೊಂಡು ವಿವಿಧ ಕಾಲೇಜುಗಳ ಎನ್.ಎಸ್.ಎಸ್ ಸ್ವಯಂಸೇವಕರು ವೃದ್ಧಾಶ್ರಮದ ನಿವಾಸಿಗಳಿಗೆ ಮನರಂಜನಾತ್ಮಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ಹಿರಿಯರಿಗಾಗಿ ಆಟಗಳು, ಸಂಗೀತ, ನೃತ್ಯ ಹಾಗೂ ಸಂಭಾಷಣೆಗಳ ಮೂಲಕ ಆನಂದಭರಿತ ವಾತಾವರಣ ನಿರ್ಮಿಸಲಾಯಿತು.
ಅನಂತರ ನಡೆದ ಔಪಚಾರಿಕ ಕಾರ್ಯಕ್ರಮದಲ್ಲಿ ಬೆಥನಿ ಕಾನ್ವೆಂಟ್ ವೃದ್ಧಾಶ್ರಮದ ಹೌಸ್ ಸೂಪರ್‌ವೈಸರ್ ಸಿಸ್ಟರ್ ವೀಣಾ ಅವರು ಮಾತನಾಡಿ ತಮ್ಮ ಪೋಷಕರನ್ನು ವೃದ್ಧಾಶ್ರಮಕ್ಕೆ ಕಳುಹಿಸುವುದು ಕರುಣೆರಹಿತ ಕೃತ್ಯ. ಅವರ ತ್ಯಾಗ, ಪ್ರೀತಿ ಮತ್ತು ಕಾಳಜಿಗೆ ಸದಾ ಕೃತಜ್ಞರಾಗಿರಿ. ಅವರು ನಿಮ್ಮ ಜೀವನದ ಮೊದಲ ಗುರುಗಳು; ಅವರ ಸೇವೆ ನಿಮ್ಮ ಧರ್ಮ ಎಂದು ಮನಮುಟ್ಟುವ ಸಂದೇಶ ನೀಡಿದರು.
ಎನ್.ಎಸ್.ಎಸ್ ಕಡಬ–ಸುಳ್ಯ ವಲಯ ಚಟುವಟಿಕಾ ಸಂಯೋಜಕಿ ಆರತಿ ಕೆ ಅವರು ಮಾತನಾಡಿದ ಸೇವೆ ಎಂದರೆ ಕೇವಲ ದೈಹಿಕ ಸಹಾಯವಲ್ಲ, ಪ್ರೀತಿ, ಕರುಣೆ ಮತ್ತು ಸಹಾನುಭೂತಿ ತೋರಿಸುವುದೇ ನಿಜವಾದ ಸೇವೆ. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಮಾನವೀಯತೆ, ಸಹಾನುಭೂತಿ ಹಾಗೂ ಸಾಮಾಜಿಕ ಜವಾಬ್ದಾರಿತೆಯ ಅರಿವು ಮೂಡಿಸುತ್ತವೆ ಎಂದು ಹೇಳಿದರು.
ನೆಲ್ಯಾಡಿ ವಿಶ್ವವಿದ್ಯಾಲಯ ಕಾಲೇಜು ಎನ್.ಎಸ್.ಎಸ್ ಯೋಜನಾಧಿಕಾರಿ ಶ್ರುತಿ ಸ್ವಾಗತಿಸಿದರು. ವೀಕ್ಷಾ ಕಾರ್ಯಕ್ರಮ ನಿರೂಪಿಸಿದರು. ವರ್ಷಿಣಿ ವಂದಿಸಿದರು.
ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯ ಕಾಲೇಜಿನ ಬೋಧಕ–ಬೋಧಕೇತರ ಸಿಬ್ಬಂದಿ ಹಾಗೂ ವಲಯದ ಕಾಲೇಜಿನ ಎನ್.ಎಸ್.ಎಸ್ ಸ್ವಯಂಸೇವಕರು ಭಾಗವಹಿಸಿದ್ದರು.






