

ನೆಲ್ಯಾಡಿ: ಸ್ಥಳೀಯ ವ್ಯಾಪಾರ ವಲಯದ ಹೆಸರಾಂತ ಉದ್ಯಮಿ, ಗೂಡಂಗಡಿ ಲಕ್ಷ್ಮಣ ಗೌಡ ಎಂದು ಜನಪ್ರಿಯರಾಗಿದ್ದ ನೆಲ್ಯಾಡಿಯ ಗೋಕುಲ್ ಸ್ವೀಟ್ಸ್ ಸಂಸ್ಥೆಯ ಸಂಸ್ಥಾಪಕ ಕೌಕ್ರಾಡಿ ಗ್ರಾಮದ ಕಟ್ಟೆಮಜಲು ನಿವಾಸಿ ಲಕ್ಷ್ಮಣ ಗೌಡ (73) ಅವರು ಅಲ್ಪಕಾಲದ ಅನಾರೋಗ್ಯದಿಂದ ಇಂದು (ಅ.15) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಸುಮಾರು 15 ದಿನಗಳ ಹಿಂದೆ ಪಾರ್ಶ್ವವಾಯುವಿನ ಪರಿಣಾಮದಿಂದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮಧ್ಯಾಹ್ನ ಅವರು ಕೊನೆಯುಸಿರೆಳೆದರು.
ಕಳೆದ ಐವತ್ತು ವರ್ಷಗಳಿಂದ ‘ನೆಲ್ಯಾಡಿ ಗೋಕುಲ್ ಸ್ವೀಟ್ಸ್’ ಎಂಬ ಹೆಸರಿನಲ್ಲಿ ವ್ಯಾಪಾರ ನಡೆಸುತ್ತಾ ಸ್ಥಳೀಯರ ಪ್ರೀತಿ, ವಿಶ್ವಾಸ ಗಳಿಸಿದ ಲಕ್ಷ್ಮಣ ಗೌಡರು ತಮ್ಮ ಸರಳ, ಸಹೃದಯ ವ್ಯಕ್ತಿತ್ವದಿಂದ ಎಲ್ಲರ ಮನಗೆದ್ದಿದ್ದರು.
ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಅವರ ಪ್ರಾರ್ಥಿವ ಶರೀರಕ್ಕೆ ನೆಲ್ಯಾಡಿ – ಕೌಕ್ರಾಡಿ ವರ್ತಕ ಸಂಘ ಮತ್ತು ಸ್ಥಳೀಯ ವರ್ತಕರಿಂದ ಅಂತಿಮ ನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ನೆಲ್ಯಾಡಿ–ಕೌಕ್ರಾಡಿ ವರ್ತಕ ಹಾಗೂ ಕೈಗಾರಿಕೆ ಸಂಘದ ಅಧ್ಯಕ್ಷ ಸತೀಶ್ ಕೆ.ಎಸ್ ದುರ್ಗಾಶೀ, ಗೌರವಾಧ್ಯಕ್ಷ ರಫೀಕ್ ಸೀಗಲ್, ಉಪಾಧ್ಯಕ್ಷ ಗಣೇಶ್ ರಶ್ಮಿ, ಕಾರ್ಯದರ್ಶಿ ಪ್ರಶಾಂತ್ ಸಿ.ಹೆಚ್, ಕೌಕ್ರಾಡಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಲೋಕೇಶ್ ಬಾಣಜಾಲು ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಅನೇಕ ವರ್ತಕರು ಅಂತಿಮ ನಮನ ಸಲ್ಲಿಸಿದರು.






