ತೆಂಕುತಿಟ್ಟಿನ ತಾರೆಯು ಅಸ್ತಂಗತ — ಯಕ್ಷಗಾನದ ಗಾನಕೋಗಿಲೆ ದಿನೇಶ್ ಅಮ್ಮಣ್ಣಾಯ ಇನ್ನಿಲ್ಲ

ಶೇರ್ ಮಾಡಿ

ಕೊಕ್ಕಡ: ಯಕ್ಷಗಾನ ಲೋಕದ ‘ಗಾನಕೋಗಿಲೆ’, ತೆಂಕುತಿಟ್ಟಿನ ಅಗ್ರಗಣ್ಯ ಭಾಗವತ, ಭಾವಗಾಯನದ ಜೀವಂತ ದಂತಕಥೆ ದಿನೇಶ್ ಅಮ್ಮಣ್ಣಾಯ(68) ಅಲ್ಪಕಾಲದ ಅಸೌಖ್ಯದಿಂದ ಅವರು ಗುರುವಾರ ಬೆಳಗ್ಗೆ 9:30ಕ್ಕೆ ಮನೆಯಲ್ಲಿ ಕೊನೆಯುಸಿರೆಳೆದರು.

ಬಹು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅಮ್ಮಣ್ಣಾಯರು ಇತ್ತೀಚೆಗೆ ಸಾರ್ವಜನಿಕ ಕಾರ್ಯಕ್ರಮಗಳಿಂದ ದೂರ ಉಳಿದಿದ್ದರು. ಮೂಲತಃ ಕಡಬ ತಾಲೂಕಿನ ಪಂಜ ಸಮೀಪದ ಬಳ್ವದವರಾದ ಅವರು ಕಳೆದ ಕೆಲವು ವರ್ಷಗಳಿಂದ ಹತ್ಯಡ್ಕ ಗ್ರಾಮದ ಹೊಸ್ತೋಟ ಎಂಬಲ್ಲಿ ಕುಟುಂಬದೊಂದಿಗೆ ಸಂತೃಪ್ತ ಜೀವನ ನಡೆಸುತ್ತಿದ್ದರು.

ಯಕ್ಷಗಾನದ ಭಾವಗಾನ ಲೋಕದ ಪ್ರಕಾಶಮಾನ ನಕ್ಷತ್ರ
ಯಕ್ಷಗಾನ ಲೋಕದಲ್ಲಿ ತಮ್ಮ ಗಾನದಿಂದ, ಭಾವದಿಂದ, ಮತ್ತು ನಾಟಕೀಯ ಸ್ವರದ ಮಾಯೆಯಿಂದ ಪ್ರೇಕ್ಷಕರ ಮನ ಗೆದ್ದ ದಿನೇಶ್ ಅಮ್ಮಣ್ಣಾಯರು ಸರಳತೆ ಮತ್ತು ಭಾವುಕತೆಯ ಮೂರ್ತರೂಪವಾಗಿದ್ದರು. ಭಾಗವತಿಕೆಯಲ್ಲಿ ಭಾವಪೂರ್ಣತೆ, ರಸಸಮೃದ್ಧ ಶೈಲಿ ಮತ್ತು ಭಕ್ತಿಯೂ ಕರುಣೆಯೂ ಶೃಂಗಾರವೂ ಬೆರೆತ ಮಧುರಗಾನ ಅಮ್ಮಣ್ಣಾಯರ ವೈಶಿಷ್ಟ್ಯ.

ಭಾಗವತಿಕೆಯ ಪಯಣ:
ಸೆ.11ರಂದು 1959ರಲ್ಲಿ ನಾರಾಯಣ ಅಮ್ಮಣ್ಣಾಯ ಮತ್ತು ಕಾವೇರಿ ಅಮ್ಮ ದಂಪತಿಗಳ ಪುತ್ರನಾಗಿ ಜನಿಸಿದ ದಿನೇಶ್ ಅಮ್ಮಣ್ಣಾಯರ ವಿದ್ಯಾಭ್ಯಾಸ ಎಸ್.ಎಸ್.ಎಲ್.ಸಿ ತನಕ ಮಾತ್ರವಾದರೂ,ಅಮ್ಮಣ್ಣಾಯ ಅವರ ಕುಟುಂಬ ಕಲಾವಿದರ ಕುಟುಂಬ, ಕಲೆಯ ಪಾಠವನ್ನು ಅವರು ಜೀವನದಿಂದಲೇ ಕಲಿತರು. ಎರಡನೇ ತರಗತಿಯಲ್ಲಿ ಇದ್ದಾಗಲೇ ಖ್ಯಾತ ಮದ್ದಳೆಗಾರ ಹರಿನಾರಾಯಣ ಬೈಪಡಿತ್ತಾಯರಿಂದ ಮದ್ದಳೆ ಅಭ್ಯಾಸ ಪ್ರಾರಂಭಿಸಿದ ಅಮ್ಮಣ್ಣಾಯರು, ನಂತರ ಚಿಕ್ಕಪ್ಪ ವಿಷ್ಣು ಅಮ್ಮಣ್ಣಾಯರಿಂದ ಭಾಗವತಿಕೆಯ ಪಾಠ ಪಡೆದರು. ಸಂಗೀತದಲ್ಲಿ ತಮ್ಮ ಅಕ್ಕ ರಾಜೀವಿ ಅವರಿಂದ ತರಬೇತಿ ಪಡೆದರು, ಅವರು ಕಾಂಚನದಲ್ಲಿ ಕಲಿತು ವಿದ್ವಾನ್ ಪದವಿ ಪಡೆದವರು.

ಯಕ್ಷಗಾನ ಮೇಳಗಳ ಪಯಣದಲ್ಲಿ:
ಕರ್ನಾಟಕ ಮೇಳದಲ್ಲಿ 21 ವರ್ಷ,ಪುತ್ತೂರು ಮೇಳದಲ್ಲಿ 1 ವರ್ಷ, ಕದ್ರಿ ಮೇಳದಲ್ಲಿ 4 ವರ್ಷ, ನಂತರ ಕುಂಟಾರು ಮೇಳದಲ್ಲಿ ಅತಿಥಿ ಭಾಗವತರಾಗಿ 3 ವರ್ಷ ಮತ್ತು ಕೊನೆಗೆ ಎಡನೀರು ಮೇಳದಲ್ಲಿ 5 ವರ್ಷಗಳ ಸಾರ್ಥಕ ಸೇವೆ.

ಕಲಾ ಕುಟುಂಬದ ನೆಲೆ:
ಪತ್ನಿ ಶ್ರೀಮತಿ ಸುಧಾ ಮತ್ತು ಪುತ್ರಿಯರಾದ ಅಕ್ಷತಾ ಮತ್ತು ಅನಿತಾ ಜೊತೆಗೆ ಸಂತೃಪ್ತ ಕುಟುಂಬ.

ಪ್ರಶಸ್ತಿ:
ಯಕ್ಷಗಾನದ ಲೋಕದಲ್ಲಿ ಮಧುರಗಾನದ ಐಕಾನಾಗಿ ಗುರುತಿಸಿಕೊಂಡ ಅಮ್ಮಣ್ಣಾಯರಿಗೆ 50ಕ್ಕೂ ಹೆಚ್ಚು ಸನ್ಮಾನಗಳು ಸಂದಿವೆ. ಕರ್ನಾಟಕ ಯಕ್ಷಗಾನ ಅಕಾಡೆಮಿ ಗೌರವ ಪ್ರಶಸ್ತಿ, ‘ಗಾನಕೋಗಿಲೆ’, ‘ಮಧುರಗಾನದ ಐಸಿರಿ’, ‘ಯಕ್ಷಸಂಗೀತ ಕಲಾ ಕೌಸ್ತುಭ’ ಎಂಬ ಬಿರುದುಗಳು ಅವರದೇ. ಉಡುಪಿ ತುಳುಕೂಟದಿಂದ ‘ಸಾಮಗ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ಜನಮನ ಗೆದ್ದ ಪ್ರಸಂಗಗಳು:
ಅಮ್ಮಣ್ಣಾಯರು ಕೇವಲ ಪೌರಾಣಿಕ ಪ್ರಸಂಗಗಳಲ್ಲ, ತುಳು ಯಕ್ಷಗಾನ ಪ್ರಸಂಗಗಳಿಗೂ ಹೊಸ ಜೀವ ತುಂಬಿದವರು. ಅವರ ಗಾಯನದಲ್ಲಿ ಜೀವಂತಗೊಂಡ ಕೆಲವು ಪ್ರಸಂಗಗಳು – ಕಾಡಮಲ್ಲಿಗೆ, ಕಚ್ಚೂರ ಮಾಲ್ದಿ, ಪಟ್ಟದ ಪದ್ಮಲೆ, ಮಾನಿಷಾದ, ಸತ್ಯ ಹರಿಶ್ಚಂದ್ರ, ನಳದಮಯಂತಿ, ಅಕ್ಷಯಾಂಬರ, “ಮಾನಿಷಾದ” ಪ್ರಸಂಗದ ಭಾವಗಾಯನದಿಂದ ಅವರು ಮನೆಮಾತಾದರು. ಅವರ “ಅಕ್ಷಯಾಂಬರ” ಪ್ರಸಂಗವನ್ನು ಕೇಳದೇ ಯಕ್ಷಪ್ರಿಯರಿಗೆ ನಿದ್ರೆ ಬಾರದಷ್ಟು ಅವರ ಗಾಯನದ ಪ್ರಭಾವವಿತ್ತು.

ಸಾಥ್ ನೀಡಿದ ಹಿರಿಯರು:
ಮಲ್ಪೆ ರಾಮದಾಸ ಸಾಮಗ, ಅಳಿಕೆ ರಾಮಯ್ಯ ರೈ, ಕೋಳೂರು ರಾಮಚಂದ್ರ ರಾವ್, ಗುಂಪೆ ರಾಮಯ್ಯ ರೈ, ಅರುವ ಕೊರಗಪ್ಪ ಶೆಟ್ಟಿ ಮುಂತಾದ ದಿಗ್ಗಜರ ಸಹವಾಸದಲ್ಲಿ ಅಮ್ಮಣ್ಣಾಯರು ತಮ್ಮ ಕಲಾ ಅನುಭವವನ್ನು ಶ್ರೀಮಂತಗೊಳಿಸಿಕೊಂಡರು.

ಕಲೆಗೂ ಜೀವವನ್ನೇ ಕೊಟ್ಟ ಯಕ್ಷಭಕ್ತ:
ಯಕ್ಷಗಾನ ಭಾಗವತೆಯ ಅಸಾಧಾರಣ ಸಾಂಸ್ಕೃತಿಕ ಶಕ್ತಿಯಾಗಿ, ಭಕ್ತಿಯೂ ಭಾವವೂ ಒಂದಾದಾಗ ಸೃಷ್ಟಿಯಾಗುವ ಮಾಯೆಯ ಸಾಕ್ಷಿಯಾಗಿ, ದಿನೇಶ್ ಅಮ್ಮಣ್ಣಾಯರ ಹೆಸರು ಸದಾ ನೆನಪಿನ ನಾಳೆಯಲ್ಲಿರಲಿದೆ. ಯಕ್ಷಗಾನದ ವೇದಿಕೆ ಮೇಲೆ ಭಾವಗಾನದಿಂದ ಪ್ರೇಕ್ಷಕರ ಕಣ್ಣೀರನ್ನೂ ನಗೆಗನ್ನೀರನ್ನೂ ತರಬಲ್ಲ ಕೆಲವೇ ಭಾಗವತರಲ್ಲಿ ಒಬ್ಬರಾದ ಅವರು, ಇಂದಿಲ್ಲದಿದ್ದರೂ ಅವರ ಗಾಯನದ ಪ್ರತಿಧ್ವನಿ ಇನ್ನೂ ಯಕ್ಷರಂಗದ ಮಡಿಲಲ್ಲಿ ಕೇಳಿಸುತ್ತಲೇ ಇರುತ್ತದೆ.

  •  

Leave a Reply

error: Content is protected !!