


ಮಂಗಳೂರು: ಮಂಗಳೂರು ನಗರ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ದಾಖಲಾಗಿದ್ದ ಒಟ್ಟು ಒಂಬತ್ತು ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮಹಿಳಾ ವಂಚಕಿ ಫರಿದಾ ಬೇಗಂ ಅವರನ್ನು ಬರ್ಕೆ ಠಾಣೆ ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ.
ಬರ್ಕೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮೊಕದ್ದಮೆ ಸಂಖ್ಯೆ 77/2025ರ ಕಲಂ 316(2), 318(2), 3(5) BNS-2023 ಅಡಿಯಲ್ಲಿ ಈ ಪ್ರಕರಣ ದಾಖಲಾಗಿತ್ತು. ದೂರುದಾರ ಜಯರಾಯ ಅವರು ಮಂಗಳೂರಿನ ಎಂಪೈರ್ ಮಾಲ್‌ನಲ್ಲಿ “ಲ್ಯಾಪ್‌ಟಾಪ್ ಬಜಾರ್” ಹೆಸರಿನಲ್ಲಿ ಅಂಗಡಿ ನಡೆಸುತ್ತಿದ್ದು, ಆರೋಪಿತೆ ಫರಿದಾ ಬೇಗಂ ಅವರು ತಮ್ಮ ಪರಿಚಿತ ವ್ಯಕ್ತಿಯ ಮೂಲಕ ಮಾನ್ಯತೆ ಇಲ್ಲದ ಚೆಕ್‌ಗಳನ್ನು ನೀಡಿ ಮೂರೂ ಬೆಲೆಬಾಳುವ ಲ್ಯಾಪ್‌ಟಾಪ್‌ಗಳನ್ನು ಖರೀದಿಸಿ ರೂ.1.98 ಲಕ್ಷ ಮೊತ್ತವನ್ನು ಪಾವತಿಸದೆ ವಂಚನೆ ನಡೆಸಿದ್ದರು.
ಪೊಲೀಸರ ಪ್ರಕಾರ, ಆರೋಪಿತೆ ಫರಿದಾ ಬೇಗಂ (28), ಮುತ್ತೂರು ಗ್ರಾಮ, ಕುಪ್ಪೆಪದವು ನಿವಾಸಿಯಾಗಿದ್ದು, ಆಕೆಯನ್ನು ಬರ್ಕೆ ಠಾಣೆಯ ಪೊಲೀಸ್ ನಿರೀಕ್ಷಕ ಮೋಹನ ಕೊಟ್ಟಾರಿ ಅವರ ನೇತೃತ್ವದಲ್ಲಿ ತನಿಖಾಧಿಕಾರಿ ವಿನಾಯಕ ತೊರಗಲ್ ಹಾಗೂ ಮಹಿಳಾ ಸಿಬ್ಬಂದಿಗಳ ತಂಡ ಬಂಧಿಸಿದೆ.
ಬಂಧಿತೆಯನ್ನು ದಿನಾಂಕ ಅ.19 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಸರಣಿ ವಂಚನೆ:
ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಫರಿದಾ ಬೇಗಂ ಅವರು ವಿವಿಧ ಚಿನ್ನಾಭರಣ ಮತ್ತು ಎಲೆಕ್ಟ್ರಾನಿಕ್ ಅಂಗಡಿಗಳಿಗೆ ಭೇಟಿ ನೀಡಿ, ನಕಲಿ ಚೆಕ್‌ಗಳನ್ನು ನೀಡಿ ವಸ್ತುಗಳನ್ನು ಪಡೆದು ವಂಚನೆ ಮಾಡುವ ಶೈಲಿ ಅನುಸರಿಸುತ್ತಿದ್ದರು.
ಅವರ ವಿರುದ್ಧ ಈಗಾಗಲೇ ಕೆಳಗಿನ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ:
ಮಂಗಳೂರು ಕಾವೂರು ಪೊಲೀಸ್ ಠಾಣೆ – 1 ಪ್ರಕರಣ, ಬಜಪೆ ಪೊಲೀಸ್ ಠಾಣೆ – 1 ಪ್ರಕರಣ, ಮೂಡಬಿದ್ರೆ ಪೊಲೀಸ್ ಠಾಣೆ – 1 ಪ್ರಕರಣ, ಮುಲ್ಕಿ ಪೊಲೀಸ್ ಠಾಣೆ – 1 ಪ್ರಕರಣ, ಪುತ್ತೂರು ನಗರ ಪೊಲೀಸ್ ಠಾಣೆ – 3 ಪ್ರಕರಣ
ಉಡುಪಿ ಜಿಲ್ಲೆಯ ಶಿರ್ವ ಪೊಲೀಸ್ ಠಾಣೆ – 1 ಪ್ರಕರಣ, ಮೂಲ್ಕಿ ಠಾಣೆಯ ಪ್ರಕರಣದಲ್ಲಿ ಆಕೆ ಮಾನ್ಯ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡು ವಿಚಾರಣೆಗೆ ಹಾಜರಾಗದೇ ಇರುವುದರಿಂದ, ನ್ಯಾಯಾಲಯವು ಆಕೆಯ ವಿರುದ್ಧ ವಾರೆಂಟ್ ಹೊರಡಿಸಿತ್ತು. ಅಲ್ಲದೇ ಕಾವೂರು ಮತ್ತು ಮೂಡಬಿದ್ರೆ ಠಾಣೆಗಳಲ್ಲಿ ದಾಖಲಾಗಿದ್ದ ಪ್ರಕರಣಗಳಲ್ಲಿ ಆಕೆ ದಸ್ತಗಿರಿಯಾಗದೆ ತಲೆಮರೆಸಿಕೊಂಡಿದ್ದಳು.






