


ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ಪ್ರಸಿದ್ಧ ಶ್ರೀ ಪಜಿರಡ್ಕ ಸದಾಶಿವೇಶ್ವರ ದೇವಸ್ಥಾನದ ಮುಂಭಾಗ ಹರಿಯುವ ನೇತ್ರಾವತಿ ನದಿಯಲ್ಲಿ ಭಾನುವಾರ ಬೆಳಿಗ್ಗೆ ಮೊಸಳೆ ಕಾಣಿಸಿಕೊಂಡ ಘಟನೆ ಸ್ಥಳೀಯರಲ್ಲಿ ಆತಂಕ ಉಂಟುಮಾಡಿದೆ.
ದೇವಸ್ಥಾನದ ಸಮೀಪ ಮೃತ್ಯುಂಜಯ ನದಿ ಮತ್ತು ನೇತ್ರಾವತಿ ನದಿ ಸಂಗಮಗೊಳ್ಳುವ ಸ್ಥಳದಲ್ಲಿ, ಬೆಳಗಿನ ಸುಮಾರು 10 ಗಂಟೆಯ ಸಮಯದಲ್ಲಿ, ಮೊಸಳೆ ನೀರಿನಲ್ಲಿ ಈಜಾಡುತ್ತಿರುವುದು ದೇವಸ್ಥಾನಕ್ಕೆ ಬಂದ ಭಕ್ತರಿಗೆ ಗೋಚರಿಸಿದೆ. ನಂತರ ಅದು ನದಿಯ ಇನ್ನೊಂದು ಭಾಗದಲ್ಲಿ ಮರಳಿನ ತಟ್ಟೆಯಲ್ಲಿ ವಿಶ್ರಮಿಸುತ್ತಿರುವುದನ್ನು ಕಂಡುಬಂದಿದೆ. ಕೆಲವು ಕ್ಷಣಗಳ ಬಳಿಕ ಮತ್ತೆ ನೀರಿನೊಳಗೆ ಇಳಿದ ಮೊಸಳೆ, ಒಂದು ಗಂಟೆಯ ಕಾಲ ಆ ಪ್ರದೇಶದಲ್ಲೇ ತಿರುಗಾಡಿದ್ದ ನಂತರ ನದಿಯ ಒಳಗೆ ಮಾಯವಾಗಿದೆ.
ಘಟನೆಯ ಬಗ್ಗೆ ಮಾಹಿತಿ ದೊರೆತ ಕೂಡಲೇ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಆದರೆ ನದಿಯಲ್ಲಿ ನೀರಿನ ವೇಗ ಹೆಚ್ಚಾಗಿರುವುದು ಹಾಗೂ ತಳಭಾಗದಲ್ಲಿ ಹೂಳು ತುಂಬಿರುವುದರಿಂದ ಮೊಸಳೆಯ ನಿಖರ ಪತ್ತೆಗೆ ಅಡ್ಡಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳೀಯರ ಪ್ರಕಾರ, ಕಳೆದ ಮೂರು-ನಾಲ್ಕು ದಿನಗಳಿಂದ ನೇತ್ರಾವತಿ ಮತ್ತು ಮೃತ್ಯುಂಜಯ ನದಿ ಪ್ರದೇಶದಲ್ಲಿ ಮೊಸಳೆಗಳು ಕಾಣಿಸುತ್ತಿವೆ ಎಂದು ಹೇಳಲಾಗುತ್ತಿದೆ. ಇದೇ ಪ್ರದೇಶದಲ್ಲಿ ಸುಮಾರು ನಾಲ್ಕು ವರ್ಷಗಳ ಹಿಂದೆ ಸಹ ಮೊಸಳೆ ಪತ್ತೆಯಾಗಿದ್ದು, ಬಳಿಕ ಸ್ಥಳೀಯರ ಬಾವಿಯಲ್ಲಿ ಸಿಕ್ಕುಬಿದ್ದಿದ್ದ ಅದನ್ನು ಅರಣ್ಯ ಇಲಾಖೆಯವರು ಯಶಸ್ವಿಯಾಗಿ ರಕ್ಷಿಸಿ ದೂರದ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸಿದ್ದರು.






