ಅ.24ರಂದು ಸೌತಡ್ಕದಲ್ಲಿ ಶ್ರೀ ಮಹಾಗಣಪತಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ಶಿಲಾನ್ಯಾಸ

ಶೇರ್ ಮಾಡಿ

ಕೊಕ್ಕಡ: ವಿದ್ಯೆ ಜೀವನದ ಸೌಂದರ್ಯವನ್ನು ಅರಿಯುವ ಮೆಟ್ಟಿಲು; ವಿದ್ಯಾರ್ಥಿಯು ರಾಷ್ಟ್ರದ ಭವಿಷ್ಯ” ಎನ್ನುವ ದೃಷ್ಟಿಯಿಂದ ಕಳೆದ ಶತಮಾನಕ್ಕೂ ಹೆಚ್ಚು ಕಾಲದಿಂದ ಶಿಕ್ಷಣ ಕ್ಷೇತ್ರದಲ್ಲಿ ಅಗ್ರಗಣ್ಯ ಸೇವೆ ಸಲ್ಲಿಸುತ್ತಿರುವ ವಿವೇಕಾನಂದ ವಿದ್ಯಾವರ್ಧಕ ಸಂಘ (ರಿ.) ಪುತ್ತೂರು, ಇದೀಗ ಮತ್ತೊಂದು ಶೈಕ್ಷಣಿಕ ಮೈಲುಗಲ್ಲು ಇಡುತ್ತಿದೆ. ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಪುಣ್ಯಕ್ಷೇತ್ರ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದ ಸನಿಹದಲ್ಲಿ ನೂತನ ‘ಶ್ರೀ ಮಹಾಗಣಪತಿ ಇಂಗ್ಲೀಷ್ ಮೀಡಿಯಂ ಸ್ಕೂಲ್’ ಸ್ಥಾಪನೆಗೊಳ್ಳಲಿದ್ದು, ಇದರ ಶಿಲಾನ್ಯಾಸ ಕಾರ್ಯಕ್ರಮ ಅಕ್ಟೋಬರ್ 24, 2025ರಂದು ಬೆಳಿಗ್ಗೆ 8.04ರ ಶುಭ ಮುಹೂರ್ತದಲ್ಲಿ ನಡೆಯಲಿದೆ.

1915ರಲ್ಲಿ ಸ್ಥಾಪನೆಯಾದ ಈ ಸಂಸ್ಥೆ ಈಗಾಗಲೇ 85 ಶಿಕ್ಷಣ ಸಂಸ್ಥೆಗಳು ಮತ್ತು 5 ಸಾಮಾಜಿಕ ಪ್ರಕಲ್ಪಗಳನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದು, ಸುಮಾರು 21,276 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸಂಸ್ಥೆಯ ಶತಮಾನೋತ್ಸವ ಸಾಧನೆಗೆ ಮತ್ತೊಂದು ಶ್ರೇಷ್ಠ ಅಧ್ಯಾಯವಾಗಿ ಸೌತಡ್ಕದಲ್ಲಿ ಶಾಲೆ ನಿರ್ಮಾಣಗೊಳ್ಳುತ್ತಿದೆ ಎಂದು ಶಿಲಾನ್ಯಾಸ ಸಮಿತಿ ಅಧ್ಯಕ್ಷ ಹರೀಶ್ ರಾವ್ ಮುಂಡ್ರುಪ್ಪಾಡಿ ಅ.20ರಂದು ಬೆಳ್ತಂಗಡಿ ಸುವರ್ಣ ಆರ್ಕೇಡ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ದೇವಮಂದಿರದ ಸಾನ್ನಿಧ್ಯದಲ್ಲಿ ನೂತನ ವಿದ್ಯಾಮಂದಿರ
ಕೊಕ್ಕಡ, ಶಿಶಿಲ, ಶಿಬಾಜೆ, ರೆಖ್ಯ, ಹತ್ಯಡ್ಕ, ಕೌಕ್ರಾಡಿ, ಗೋಳಿತ್ತೊಟ್ಟು, ನಿಡ್ಲೆ, ಪಟ್ರಮೆ, ಕಳೆಂಜ ಮೊದಲಾದ ಗ್ರಾಮಗಳ ರೈತಾಪಿ ಜನರ ಆಶಯದಂತೆ ಈ ನೂತನ ವಿದ್ಯಾಮಂದಿರ ನಿರ್ಮಾಣಗೊಳ್ಳಲಿದೆ. ಸುಮಾರು 1 ಎಕರೆ 10 ಸೆಂಟ್ಸ್ ಜಾಗದಲ್ಲಿ ಆಧುನಿಕ ಸೌಲಭ್ಯಗಳೊಂದಿಗೆ ಎಲ್‌ಕೆಜಿ ಇಂದ ಹತ್ತನೆ ತರಗತಿ ವರೆಗಿನ ತರಗತಿಗಳು ನಡೆಯಲಿವೆ. ಮೌಲ್ಯಾಧಾರಿತ ಭಾರತೀಯತೆಯ ಶಿಕ್ಷಣದ ಜೊತೆಗೆ ಆಧುನಿಕ ಬೋಧನೆ ನೀಡುವ ಉದ್ದೇಶದಿಂದ ಶಾಲೆ ನಿರ್ಮಾಣವಾಗುತ್ತಿದೆ.

ಶಿಲಾನ್ಯಾಸ ಹಾಗೂ ಸಭಾ ಕಾರ್ಯಕ್ರಮ
ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಶಿಲಾನ್ಯಾಸ ಸಮಾರಂಭ ಪೂರ್ಣಗೊಂಡ ಬಳಿಕ ಪೂರ್ವಾಹ್ನ 10.30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕರವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ.

ಮುಖ್ಯ ಅತಿಥಿಗಳಾಗಿ ಭಾರತ ಸರ್ಕಾರದ ಬೃಹತ್ ಕೈಗಾರಿಕೆಗಳು ಮತ್ತು ಸಾರ್ವಜನಿಕ ಉದ್ಯಮಗಳ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ, ಲೋಕಸಭಾ ಸದಸ್ಯರಾದ ಕ್ಯಾ. ಬ್ರಿಜೇಶ್ ಚೌಟ, ಕೋಟ ಶ್ರೀನಿವಾಸ ಪೂಜಾರಿ, ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜ, ಎಂ.ಆರ್.ಜಿ. ಗ್ರೂಪ್‌ನ ಚೇರ್‍ಮನ್ ಕೆ. ಪ್ರಕಾಶ್ ಶೆಟ್ಟಿ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ.

ಗೌರವಾತಿಥಿಗಳ ಉಪಸ್ಥಿತಿ
ಕಾರ್ಯಕ್ರಮದಲ್ಲಿ ಕಾರ್ಕಳ ಶಾಸಕರಾದ ವಿ. ಸುನಿಲ್ ಕುಮಾರ್, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ, ಮೂಡುಬಿದಿರೆ ಶಾಸಕರಾದ ಉಮಾನಾಥ ಕೋಟ್ಯಾನ್, ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್, ಮಂಗಳೂರು ದಕ್ಷಿಣ ಶಾಸಕರಾದ ಡಿ. ವೇದವ್ಯಾಸ ಕಾಮತ್, ಮಂಗಳೂರು ಉತ್ತರ ಶಾಸಕರಾದ ಡಾ. ಭರತ್ ಶೆಟ್ಟಿ ವೈ, ಬೈಂದೂರು ಶಾಸಕರಾದ ಗುರುರಾಜ ಗಂಟಿಹೊಳೆ, ಬೇಲೂರು ಶಾಸಕರಾದ ಸುರೇಶ್, ಸಕಲೇಶಪುರ ಶಾಸಕರಾದ ಮಂಜುನಾಥ, ವಿಧಾನ ಪರಿಷತ್ ಸದಸ್ಯರಾದ ಪ್ರತಾಪಸಿಂಹ ನಾಯಕ್, ಎಸ್.ಎಲ್. ಭೋಜೇಗೌಡ, ಕಿಶೋರ್ ಕುಮಾರ್ ಬೊಟ್ಯಾಡಿ, ಪ್ರಾಣೇಶ್, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ಕೊಕ್ಕಡ ಪಂಚಾಯತ್ ಅಧ್ಯಕ್ಷೆ ಬೇಬಿ, ಸೌತಡ್ಕ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ, ಕಾರ್ಯನಿರ್ವಹಣಾಧಿಕಾರಿ ಕೆ.ವಿ. ಶ್ರೀನಿವಾಸ, ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಉದ್ಯಮಿ ಕೃಷ್ಣರಾಜ್ (ಪೆರ್ನೆ ರಾಜ್ ಬೋರ್‌ವೆಲ್ಸ್), ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ರಾಧಾಕೃಷ್ಣ ನಾಯ್ಕ್, ಉದ್ಯಮಿಗಳು ಶಿವಪ್ರಸಾದ್ ಇಜ್ಜಾವು, ಸುಧಾಕರ ಶೆಟ್ಟಿ, ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಅಧ್ಯಕ್ಷ ಕೃಷ್ಣ ಭಟ್ ಹಿತ್ತಿಲು, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ ಪೂವಾಜೆ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿರುವರು.

ಪತ್ರಿಕಾಗೋಷ್ಠಿಯಲ್ಲಿ ಕಟ್ಟಡ ನಿರ್ಮಾಣ ಸಮಿತಿ ಕಾರ್ಯದರ್ಶಿ ರಾಘವೇಂದ್ರ ನಾಯಕ್, ಕೊಕ್ಕಡ ಸಹಕಾರಿ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಟ್ರಸ್ಟ್ ಅಧ್ಯಕ್ಷ ಕೃಷ್ಣ ಭಟ್ಟ ಹಿತ್ತಿಲು, ಉದ್ಯಮಿ ಬಾಲಕೃಷ್ಣ ನೈಮಿಷ, ಉಪಸ್ಥಿತರಿದ್ದರು. ಮಾಧ್ಯಮ ಸಂಚಾಲಕ ವೃಷಾಂಕ್ ಖಾಡಿಲ್ಕರ್ ಸ್ವಾಗತಿಸಿ, ಧನ್ಯವಾದವಿತ್ತರು.

  •  

Leave a Reply

error: Content is protected !!