


ಮಂಗಳೂರು: ಪ್ರತಿ ವರ್ಷ ಅ.21ರಂದು ಕರ್ತವ್ಯ ನಿರ್ವಹಿಸುವಾಗ ಪ್ರಾಣ ತ್ಯಾಗ ಮಾಡಿದ ಹುತಾತ್ಮ ಪೊಲೀಸರ ಸ್ಮರಣಾರ್ಥವಾಗಿ ಪೊಲೀಸ್ ಹುತಾತ್ಮ ದಿನಾಚರಣೆ ರಾಷ್ಟ್ರದಾದ್ಯಂತ ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸ್ ಇಲಾಖೆಯ ವತಿಯಿಂದಲೂ ಮಂಗಳೂರು ನಗರ ಪೊಲೀಸ್ ಕಛೇರಿ ಆವರಣದಲ್ಲಿ ಹುತಾತ್ಮರ ದಿನಾಚರಣೆ ನೆರವೇರಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಂಗಳೂರು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಸವರಾಜ್ ಅವರು ಮಾತನಾಡಿ ಪೊಲೀಸರು ಸಮಾಜದ ಶಾಂತಿ ಮತ್ತು ಸುರಕ್ಷತೆಯ ಕಾವಲುಗಾರರು. ನೊಂದವರ ಧ್ವನಿಯಾಗಿ 24 ಗಂಟೆಯೂ ಸೇವೆ ಸಲ್ಲಿಸುವ ಇಲಾಖೆ ಪೊಲೀಸ್ ಇಲಾಖೆ. 2001ರಲ್ಲಿ ಸಂಸತ್ ಭವನದ ಮೇಲೆ ನಡೆದ ದಾಳಿ, 2008ರಲ್ಲಿ ಮುಂಬೈ ತಾಜ್ ಹೋಟೆಲ್ ಮೇಲೆ ನಡೆದ ಭಯೋತ್ಪಾದನಾ ದಾಳಿ ಸಂದರ್ಭದಲ್ಲಿಯೂ ಪೊಲೀಸರು ತಮ್ಮ ಕರ್ತವ್ಯದಲ್ಲಿ ಅಪ್ರತಿಮ ಧೈರ್ಯ ತೋರಿಸಿದ್ದಾರೆ. ಅಲ್ಲದೆ, ಕೊರೊನಾ ಸಮಯದಲ್ಲಿಯೂ ಜೀವದ ಹಂಗು ತೊರೆದು ಸಮಾಜದ ಸೇವೆಗಾಗಿ ಕಾರ್ಯನಿರ್ವಹಿಸಿದ ಉದಾತ್ತ ಸೇವೆಯನ್ನು ಮರೆಯಲಾಗದು ಎಂದು ಶ್ಲಾಘಿಸಿದರು.
ಗೌರವ ಉಪಸ್ಥಿತಿಯಲ್ಲಿ ಅಮಿತ್ ಸಿಂಗ್, ಐಪಿಎಸ್, ಪೊಲೀಸ್ ಮಹಾ ನಿರೀಕ್ಷಕರು, ಪಶ್ಚಿಮ ವಲಯ ಮಂಗಳೂರು, ಸುಧೀರ್ ಕುಮಾರ್ ರೆಡ್ಡಿ, ಐಪಿಎಸ್, ಪೊಲೀಸ್ ಆಯುಕ್ತರು, ಮಂಗಳೂರು ನಗರ, ಡಾ. ಅರುಣ್ ಕೆ., ಐಪಿಎಸ್, ಪೊಲೀಸ್ ಅಧೀಕ್ಷಕರು, ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಅರಣ್ಯ ಇಲಾಖೆಯ ಸಿಸಿಎಫ್ ಕರಿಕಾಲನ್ ಅವರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಹಿರಿಯ ಹಾಗೂ ಕಿರಿಯ ಪೊಲೀಸ್ ಅಧಿಕಾರಿಗಳು, ನಿವೃತ್ತ ಪೊಲೀಸ್ ಸಿಬ್ಬಂದಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ವಿಶೇಷ ಆಹ್ವಾನಿತರಾಗಿ ಹಾಜರಿದ್ದರು.
ದಿನಾಂಕ 01-09-2024 ರಿಂದ 31-08-2025ರ ಅವಧಿಯಲ್ಲಿ ದೇಶದಾದ್ಯಂತ ಒಟ್ಟು 191 ಪೊಲೀಸರು ಕರ್ತವ್ಯನಿರ್ವಹಣೆಯ ವೇಳೆ ಹುತಾತ್ಮರಾಗಿದ್ದು, ಕರ್ನಾಟಕ ರಾಜ್ಯದ 8 ಮಂದಿ ಪೊಲೀಸರಿಗೂ ಗೌರವ ವಂದನೆ ಸಲ್ಲಿಸಲಾಯಿತು.
ಕಾರ್ಯಕ್ರಮದ ಕೊನೆಯಲ್ಲಿ ಹುತಾತ್ಮ ಪೊಲೀಸರ ಸ್ಮರಣಾರ್ಥ ಎರಡು ನಿಮಿಷ ಮೌನಾಚರಣೆ ಸಲ್ಲಿಸಲಾಯಿತು. ದೇಶದ ಭದ್ರತೆಗೆ ಪ್ರಾಣ ತ್ಯಾಗ ಮಾಡಿದ ಹುತಾತ್ಮರ ತ್ಯಾಗವನ್ನು ಸ್ಮರಿಸಿ ಗೌರವ ನಮನ ಸಲ್ಲಿಸಲಾಯಿತು.






