

ನೆಲ್ಯಾಡಿ: ಗ್ರಾಮೀಣ ಭಾಗದ ಜನರಲ್ಲಿ ಕಣ್ಣಿನ ಪೊರೆ (ಕ್ಯಾಟರಾಕ್ಟ್) ಸಮಸ್ಯೆಯಿಂದ ಬಳಲುತ್ತಿರುವವರಿಗೆ ಆಶಾಕಿರಣವಾಗಿ, ಉಚಿತ ನೇತ್ರ ಚಿಕಿತ್ಸಾ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರವನ್ನು ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಂಗಳವಾರದಂದು ಲಯನ್ಸ್ ಕ್ಲಬ್ ಅಲಂಕಾರು ದುರ್ಗಾಂಬಾ, ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ನೆಲ್ಯಾಡಿ ಲೀಜಿಯನ್ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ನೆಲ್ಯಾಡಿ ಇದರ ಆಶ್ರಯದಲ್ಲಿ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಮಂಗಳೂರು, ಜಿಲ್ಲಾ ವೆನ್ಹಾಕ್ ಆಸ್ಪತ್ರೆ ಮಂಗಳೂರು, ಸಂಚಾರಿ ನೇತ್ರ ಚಿಕಿತ್ಸಾ ಘಟಕ ಮಂಗಳೂರು ಇದರ ಸಹಯೋಗದೊಂದಿಗೆ ಆಯೋಜಿಸಲಾಯಿತು.

ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಿಶಿರ ಅವರು ಉದ್ಘಾಟನೆ ನೆರವೇರಿಸಿ ಮಾತನಾಡಿ ಗ್ರಾಮೀಣ ಜನರ ಕಣ್ಣಿನ ಆರೋಗ್ಯದ ರಕ್ಷಣೆಗೆ ನಮ್ಮ ಕೇಂದ್ರ ಸದಾ ಸಿದ್ಧವಾಗಿದೆ. ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಯನ್ನು ಉಚಿತವಾಗಿ ಜಿಲ್ಲಾಸ್ಪತ್ರೆ (ವೆನ್ ಲಾಕ್), ಕೆಎಂಸಿಯ ಸಹಯೋಗದೊಂದಿಗೆ ತಜ್ಞ ವೈದ್ಯರಿಂದ ನಡೆಸಲಾಗುತ್ತದೆ. ಉಚಿತ ಕನ್ನಡಕ ವಿತರಣೆ ಸೇರಿದಂತೆ, ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ, ಲೆನ್ಸ್ ಅಳವಡಿಕೆ ಮುಂತಾದ ಸರ್ಕಾರದ ಸೌಲಭ್ಯಗಳು ಈ ಪ್ರದೇಶದ ಜನರಿಗೆ ತಲುಪಲು ನಮ್ಮ ಪ್ರಯತ್ನ ನಿರಂತರವಾಗಿರುತ್ತದೆ ಎಂದು ಹೇಳಿದರು.
ಸಂಚಾರಿ ನೇತ್ರ ಚಿಕಿತ್ಸಾ ಘಟಕದ ಮುಖ್ಯಸ್ಥೆ ಸುಮನ ಅವರು ಉಚಿತ ಪೊರೆ ಶಸ್ತ್ರ ಚಿಕಿತ್ಸೆಯ ಕುರಿತು ಮಾಹಿತಿ ನೀಡುತ್ತಾ, ಪೊರೆ ಶಸ್ತ್ರ ಚಿಕಿತ್ಸೆ ಪಡೆಯುವವರು ಯಾವುದೇ ಆತಂಕವಿಲ್ಲದೆ ಜಿಲ್ಲಾಸ್ಪತ್ರೆಯ ತಜ್ಞರಿಂದ ನಡೆಯುವ ಶಸ್ತ್ರಚಿಕಿತ್ಸೆಗೆ ಧೈರ್ಯದಿಂದ ಮುಂದೆ ಬರಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಲಯನ್ಸ್ ಕ್ಲಬ್ ಆಲಂಕಾರು ದುರ್ಗಾಂಬಾ ಅಧ್ಯಕ್ಷ ಲ ಪದ್ಮಪ ಗೌಡ ವಹಿಸಿ ಮಾತನಾಡಿ ಸಾಮಾಜಿಕ ಸೇವಾ ಸಂಸ್ಥೆಗಳು ಸೇವೆಯನ್ನೇ ಗುರಿಯಾಗಿಟ್ಟುಕೊಂಡು ಜನಪರ ಕಾಳಜಿಯಿಂದ ಇಂತಹ ಶಿಬಿರಗಳನ್ನು ನಡೆಸಿದರೆ ಸಂಸ್ಥೆಗಳ ಗೌರವ ಹೆಚ್ಚಾಗುತ್ತದೆ ಜನರಲ್ಲಿ ನಂಬಿಕೆಯು ಉಳಿಯುತ್ತದೆ ಎಂದರು.
ವೇದಿಕೆಯಲ್ಲಿ ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ನೆಲ್ಯಾಡಿ ಲೀಜಿಯನ್ ಅಧ್ಯಕ್ಷ ಸೀನಿಯರ್ ಪಿಪಿಎಫ್ ಪ್ರಕಾಶ್ ಕೆ.ವೈ, ನೆಲ್ಯಾಡಿ ಗ್ರಾ.ಪಂ. ಅಧ್ಯಕ್ಷ ಸಲಾಂ ಬಿಲಾಲ್, ಸದಸ್ಯೆ ಉಷಾ ಜೋಯ್, ಬಂಟರ ಸಂಘ ಪುತ್ತೂರು ತಾಲೂಕು ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೇಲ್ವಿಚಾರಕ ಆನಂದ ಡಿ.ಬಿ. ಉಪಸ್ಥಿತರಿದ್ದು ಶುಭಹಾರೈಸಿದರು.
ತಾಲೂಕು ವೈದ್ಯಾಧಿಕಾರಿ ದೀಪಕ್ ರೈ ಹಾಗೂ ಉಪ್ಪಿನಂಗಡಿ ಪಿಎಚ್‌ಸಿ ವೈದ್ಯಾಧಿಕಾರಿ ಡಾ. ಕೃಷ್ಣಾನಂದ ಶಿಬಿರಕ್ಕೆ ಭೇಟಿ ನೀಡಿ ಸಂತಸ ವ್ಯಕ್ತಪಡಿಸಿದರು.
ಈ ಶಿಬಿರದಲ್ಲಿ ಸುಮಾರು 225 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದು, ಅವರಲ್ಲಿ 182 ಮಂದಿಗೆ ಉಚಿತ ಕನ್ನಡಕ ವಿತರಿಸಲಾಯಿತು. ಸುಮಾರು 10 ಮಂದಿ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾಗಿದ್ದಾರೆ.
ನೆಲ್ಯಾಡಿ ಪಿಎಚ್‌ಸಿ ಸಿಬ್ಬಂದಿಗಳು ಮತ್ತು ಆಶಾ ಕಾರ್ಯಕರ್ತೆಯರು ಶಿಬಿರದ ಯಶಸ್ಸಿಗೆ ಸಹಕರಿಸಿದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ ಗಂಗಾಧರ ಶೆಟ್ಟಿ ಹೊಸಮನೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ವಾಸುದೇವ ಗೌಡ ವಂದಿಸಿದರು.






