ಬಿಸಿಲೆ ಬಸ್ ಅಪಘಾತ ಗಾಯಾಳುಗಳನ್ನು ಸಾಗಿಸುತ್ತಿದ್ದ ಅಂಬ್ಯುಲೆನ್ಸ್ ಗೆ ದಾರಿಮಾಡಿಕೊಡದೆ ಹುಚ್ಚಾಟ ಮೆರೆದ ಸ್ಕೂಟಿ ಸವಾರ!

ಶೇರ್ ಮಾಡಿ

ಪುತ್ತೂರು: ಬಿಸಿಲೆ ಘಾಟ್ ರಸ್ತೆಯಲ್ಲಿ ನಡೆದ ಭೀಕರ ಬಸ್ ಅಪಘಾತದ ನಂತರ, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಅಂಬ್ಯುಲೆನ್ಸ್ ಗೆ ಅಡ್ಡಬಂದು ಸ್ಕೂಟಿ ಸವಾರನೊಬ್ಬ ಹುಚ್ಚಾಟ ಮೆರೆದ ಘಟನೆ ಬೆಳಕಿಗೆ ಬಂದಿದೆ.

ಬಿಸಿಲೆ ಘಾಟ್ ರಸ್ತೆಯಲ್ಲಿ ಮದುವೆ ಪ್ರಯಾಣಿಕರನ್ನು ಕೊಂಡೊಯ್ಯುತ್ತಿದ್ದ ಬಸ್ ಪಲ್ಟಿಯಾಗಿ ಸುಮಾರು 20 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಹಲವರನ್ನು ಪುತ್ತೂರು, ಮಂಗಳೂರು ಸೇರಿ ವಿವಿಧ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿತ್ತು.

ಈ ಘಟನೆಯ ಬಳಿಕ ಪುತ್ತೂರು ಆಸ್ಪತ್ರೆಗೆ ದಾಖಲಾಗಿದ್ದ ತೀವ್ರ ಗಾಯಗೊಂಡ ಮಹಿಳೆಯನ್ನು ಮಂಗಳೂರು ಆಸ್ಪತ್ರೆಗೆ ತುರ್ತು ಸಾಗಿಸುತ್ತಿದ್ದ ಅಂಬ್ಯುಲೆನ್ಸ್ ಗೆ ಬಿ.ಸಿ.ರೋಡ್ ಸಮೀಪ ಸ್ಕೂಟಿ ಸವಾರನೊಬ್ಬ ದಾರಿಮಾಡಿಕೊಡದೆ ಅಡ್ಡ ಬಂದು ಸುಮಾರು 4 ಕಿಲೋಮೀಟರ್ ದೂರ ಅಂಬುಲನ್ಸ್ ಗೆ ತೊಂದರೆ ಉಂಟುಮಾಡಿದಾನೆ ಎಂಬುದು ಮಾಹಿತಿ.

ಅಂಬ್ಯುಲೆನ್ಸ್ ಚಾಲಕ ಸತತವಾಗಿ ಹೋರ್ನ್ ಹಾಗೂ ಸೈರನ್ ಹಾಕಿದರೂ, ಸ್ಕೂಟಿ ಸವಾರ ಅಡ್ಡ ಬಿಟ್ಟು ಹೋಗದೆ ಮುಂದುವರೆದಿದ್ದಾನೆ. ಜೀವದ ಹೋರಾಟದಲ್ಲಿದ್ದ ಮಹಿಳೆ ಚಿಕಿತ್ಸೆ ಪಡೆಯಬೇಕಾಗಿದ್ದಾಗ ಈ ರೀತಿಯ ನಿರ್ಲಕ್ಷ್ಯದಿಂದ ಅಮೂಲ್ಯವಾದ ಸಮಯ ನಷ್ಟವಾಗಿದೆ ಎಂದು ಅಂಬ್ಯುಲೆನ್ಸ್ ಸಿಬ್ಬಂದಿಗಳು ತಿಳಿಸಿದ್ದಾರೆ.

ಘಟನೆಯ ವಿಡಿಯೋವನ್ನು ಅಂಬ್ಯುಲೆನ್ಸ್ ಸಹಚಾಲಕ ಕಾರ್ತಿಕ್ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದು, ಈ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಕಾರ್ತಿಕ್ ಅವರು ಈ ಕುರಿತು ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಅಪಘಾತಕ್ಕೊಳಗಾದವರ ಪ್ರಾಣ ಉಳಿಸುವ ಕಾರ್ಯದಲ್ಲಿ ತೊಡಗಿರುವ ಅಂಬ್ಯುಲೆನ್ಸ್ ಸಿಬ್ಬಂದಿಗೆ ಸಹಕಾರ ನೀಡುವ ಬದಲು ಅಡ್ಡಿಯಾದ ಈ ಸ್ಕೂಟಿ ಸವಾರನ ವರ್ತನೆ ಎಲ್ಲೆಡೆ ಖಂಡನೆಗೆ ಗುರಿಯಾಗಿದೆ.

ಅಂಬ್ಯುಲೆನ್ಸ್ ಗೆ ದಾರಿ ಬಿಡುವುದು ಕಾನೂನು ಬದ್ಧ ಕರ್ತವ್ಯ ನಿಯಮ ಉಲ್ಲಂಘನೆ ಮಾಡಿದವರಿಗೆ ಕಠಿಣ ಕ್ರಮ ಅಗತ್ಯ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

  •  

Leave a Reply

error: Content is protected !!