

ನೆಲ್ಯಾಡಿ: ಕನ್ನಡ ರಾಜ್ಯೋತ್ಸವದ ಅಂಗವಾಗಿ ಪ್ರತಿಭಾ ಕಾರಂಜಿ ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮ ನೆಲ್ಯಾಡಿಯ ಪಿ.ಎಂ.ಶ್ರೀ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅದ್ದೂರಿಯಾಗಿ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ನೆಲ್ಯಾಡಿ ಲೀಜಿಯನ್ ಅಧ್ಯಕ್ಷ ಸೀನಿಯರ್ ಪಿಪಿಎಫ್ ಪ್ರಕಾಶ್ ಕೆ.ವೈ ಅವರು ಮಾತನಾಡಿ ಕನ್ನಡದ ಗೌರವವನ್ನು ಉಳಿಸುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಕರ್ತವ್ಯವಾಗಿದೆ. ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಸರ್ವಾಂಗೀಣ ವಿಕಸನಕ್ಕೆ ವೇದಿಕೆ ಒದಗಿಸುತ್ತವೆ. ಅವರಲ್ಲಿರುವ ಪ್ರತಿಭೆ ಹಾಗೂ ಸೃಜನಾತ್ಮಕತೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ಇದರ ಮುಖ್ಯ ಉದ್ದೇಶ. ಇದು ಶಿಕ್ಷಣ ಮತ್ತು ಮನೋರಂಜನೆಯನ್ನು ಸಂಯೋಜಿಸಿ, ಸ್ಪರ್ಧಾತ್ಮಕ ಮನೋಭಾವ ಬೆಳೆಸುವುದರ ಜೊತೆಗೆ ನಾಡಿನ ಸಂಸ್ಕೃತಿ ಮತ್ತು ಜನಪದ ಕಲೆಗಳ ಅರಿವು ಮೂಡಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ದಿನಕರ್ ಕೆ.ಎಚ್, ಮುಖ್ಯಶಿಕ್ಷಕಿ ವೀಣಾ ಮಸ್ಕರೇನಾಸ್, ಮೌಲ್ಯಮಾಪಕರು, ಸೀನಿಯರ್ ಚೇಂಬರ್ ನೆಲ್ಯಾಡಿ ಲೀಜಿಯನ್ ನಿಕಟ ಪೂರ್ವ ಅಧ್ಯಕ್ಷ ಸೀನಿಯರ್ ಪಿಪಿಎಫ್ ಶೀನಪ್ಪ ಎಸ್, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಕಡಬ ತಾಲೂಕು ಅಧ್ಯಕ್ಷ ಸೀನಿಯರ್ ವಿಮಲ್ ಕುಮಾರ್, ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆಯ ಮುಖ್ಯಶಿಕ್ಷಕ ಸೀನಿಯರ್ ಜೋರ್ಜ್ ಕೆ. ತೋಮಸ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಶಿಕ್ಷಕ ವರ್ಗದ ಸದಸ್ಯರು ಹಾಗೂ ಸೀನಿಯರ್ ಮೇರಿ ಜೋನ್ ಕಾರ್ಯಕ್ರಮ ಯಶಸ್ವಿಗೆ ಸಹಕರಿಸಿದರು. ಶಿಕ್ಷಕಿಯರಾದ ಪ್ರವೀಣ ಸ್ವಾಗತಿಸಿ, ರತಿಲತಾ ವಂದಿಸಿದರು.






