ನೆಲ್ಯಾಡಿ ಶ್ರೀರಾಮ ಯಕ್ಷಗಾನ ತರಬೇತಿ ಕೇಂದ್ರದ ಉದ್ಘಾಟನೆ

ಶೇರ್ ಮಾಡಿ

ನೆಲ್ಯಾಡಿ: ನೆಲ್ಯಾಡಿ ಶ್ರೀರಾಮ ಯಕ್ಷಗಾನ ತಂಡದ ಆಶ್ರಯದಲ್ಲಿ ನೆಲ್ಯಾಡಿ ಪೇಟೆಯ ಶ್ರೀರಾಮ ಶಿಶು ಮಂದಿರದಲ್ಲಿ ಯಕ್ಷಗಾನ ತರಬೇತಿ ಕೇಂದ್ರದ ಉದ್ಘಾಟನಾ ಕಾರ್ಯಕ್ರಮ ಭಾನುವಾರ ನೆರವೇರಿತು.

ನೆಲ್ಯಾಡಿಯ ಹಿರಿ ಉದ್ಯಮಿ ಹಾಗೂ ವಿಲಾಸ ಹೋಟೆಲ್‌ನ ಮಾಲಕರಾದ ಸುಬ್ರಹ್ಮಣ್ಯ ಆಚಾರ್ಯ ದೀಪ ಪ್ರಜ್ವಲನೆ ಮೂಲಕ ಯಕ್ಷಗಾನ ತರಬೇತಿ ಕೇಂದ್ರವನ್ನು ಉದ್ಘಾಟಿಸಿ, ಈ ಮಹತ್ವದ ಕಲಾ ಚಟುವಟಿಕೆಗೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶ್ರೀರಾಮ ಶಾಲೆ ಸೂರ್ಯನಗರ ನೆಲ್ಯಾಡಿಯ ಮಾಜಿ ಅಧ್ಯಕ್ಷ ರವಿಚಂದ್ರ ಹೊಸವಕ್ಲು ಮಾತನಾಡಿ ನೆಲ್ಯಾಡಿ ಪ್ರದೇಶವು ಸಾಂಸ್ಕೃತಿಕ ಪಾರಂಪರ್ಯದ ನೆಲೆ. ಇಲ್ಲಿ ಕಲಾಸಕ್ತಿಯನ್ನು ಪ್ರೋತ್ಸಾಹಿಸಿ, ಪುರಾತನ ಕಲಾರೂಪವಾದ ಯಕ್ಷಗಾನವನ್ನು ಹೊಸ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಈ ತರಬೇತಿ ಕೇಂದ್ರ ಸ್ಥಾಪನೆಯಾಗಿದೆ. ಯಕ್ಷಗಾನ ಕಲೆಯ ಜೀವಂತಿಕೆ ನಮ್ಮ ಸಾಂಸ್ಕೃತಿಕ ಅಸ್ತಿತ್ವದ ಪ್ರತಿಬಿಂಬ. ತರಬೇತಿಯ ಮೂಲಕ ಮಕ್ಕಳು ಕಲೆ, ಸಂಯಮ ಹಾಗೂ ಶಿಸ್ತಿನ ಪಾಠಗಳನ್ನು ಕಲಿಯುವ ಅವಕಾಶ ದೊರೆಯುತ್ತದೆ ಎಂದು ಹೇಳಿದರು.

ತರಬೇತುದಾರರಾದ ಅರುಣ್ ಕುಮಾರ್ ಧರ್ಮಸ್ಥಳ ಅವರು ಮಾತನಾಡಿ ಪ್ರತಿ ಭಾನುವಾರ ಸಂಜೆ 4 ರಿಂದ 5.30ರ ವರೆಗೆ ಯಕ್ಷಗಾನ ನೃತ್ಯ, ಪ್ರಸಂಗ ಅಭ್ಯಾಸ, ಬಣ್ಣಗಾರಿಕೆ ಹಾಗೂ ವಿವಿಧ ಪಾರಂಪರಿಕ ಶೈಲಿಗಳ ನಿತ್ಯಾಭ್ಯಾಸ ತರಬೇತಿ ನಡೆಯಲಿದೆ. ಎರಡನೇ ತರಗತಿಯ ಮೇಲ್ಪಟ್ಟ ಆಸಕ್ತ ವಿದ್ಯಾರ್ಥಿಗಳು ಈ ತರಬೇತಿಯಲ್ಲಿ ಭಾಗವಹಿಸಬಹುದು ಎಂದು ತಿಳಿಸಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಕೌಕ್ರಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಉದಯ ಕುಮಾರ್ ಗೌಡ ದೋಂತಿಲ, ಹಾಗೂ ತರಬೇತಿ ಕಾರ್ಯಕ್ರಮದ ಸಂಚಾಲಕಿ ಸುಮನ ಎಸ್. ಪಟ್ಟೆಮನೆ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ನೆಲ್ಯಾಡಿ ಶ್ರೀರಾಮ ವಿದ್ಯಾಲಯದ ವರಮಹಾಲಕ್ಷ್ಮಿ ವ್ರತ ಪೂಜಾಸಮಿತಿಯ ಅಧ್ಯಕ್ಷೆ ಸುಪ್ರೀತಾ ರವಿಚಂದ್ರ, ನೆಲ್ಯಾಡಿ ಶ್ರೀರಾಮ ವಿದ್ಯಾಲಯದ ಮುಖ್ಯಶಿಕ್ಷಕ ಗಣೇಶ್ ವಾಗ್ಲೆ, ಪೋಷಕರು, ವಿದ್ಯಾರ್ಥಿಗಳು ಹಾಗೂ ಕಲಾಸಕ್ತರು ಭಾಗವಹಿಸಿದ್ದರು.

  •  

Leave a Reply

error: Content is protected !!