

ನೆಲ್ಯಾಡಿ: ನೆಲ್ಯಾಡಿ ಜ್ಞಾನೋದಯ ಬೆಥನಿ ವಿದ್ಯಾ ಸಂಸ್ಥೆಯಲ್ಲಿ 52ನೇ ಕನ್ನಡ ರಾಜ್ಯೋತ್ಸವ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತೆಯಾದ ಬೆಥನಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿನಿ ಅರ್ಚನಾ ಎಸ್ ಅವರಿಗೆ ಭವ್ಯ ಸ್ವಾಗತ ಕಾರ್ಯಕ್ರಮ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಲಾಯಿತು.

ಪ್ರಶಸ್ತಿ ವಿಜೇತ ವಿದ್ಯಾರ್ಥಿ ಅರ್ಚನಾ ಎಸ್ ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆಯ ಮೂಲಕ ಸಂಸ್ಥೆಯ ಸಂಚಾಲಕರಾದ ಫಾ.ಡಾ.ವರ್ಗೀಸ್ ಕೈಪಿನಡ್ಕ ಅವರ ಮಾರ್ಗದರ್ಶನದಲ್ಲಿ, ಕಾರ್ಯದರ್ಶಿ ಫಾ.ಸಾಮ್ಯುಯಲ್ ಜಾರ್ಜ್, ಜೊತೆ ಕಾರ್ಯದರ್ಶಿ ಫಾ.ವರ್ಗೀಸ್ ಎಸ್ ಅವರ ನೇತೃತ್ವದಲ್ಲಿ ಸಂಸ್ಥೆಯ ಉಪಪ್ರಿನ್ಸಿಪಾಲ್ ಜೋಸ್ ಎಂ.ಜೆ., ಹೈಸ್ಕೂಲ್ ವಿಭಾಗದ ಮುಖ್ಯಶಿಕ್ಷಕ ಜಾರ್ಜ್ ಕೆ.ತೋಮಸ್, ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕ ಜೋಸ್ ಪ್ರಕಾಶ್, ಉಪನ್ಯಾಸಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಂದ ಭವ್ಯ ಮೆರವಣಿಗೆ ಮೂಲಕ ಅವರಿಗೆ ಹಾರ್ದಿಕ ಸ್ವಾಗತ ನೀಡಲಾಯಿತು.
ಬಳಿಕ ನಡೆದ ಸಭೆಯಲ್ಲಿ ಮಾತನಾಡಿದ ಹಿರಿಯ ಶಿಕ್ಷಕಿ ರಾಜಮ್ಮ ಅವರು, ಕನ್ನಡ ರಾಜ್ಯೋತ್ಸವವು ನಮ್ಮ ನಾಡು, ನುಡಿ, ಸಂಸ್ಕೃತಿಯ ಪ್ರತೀಕ. 1956ರ ನ. 1ರಂದು ಮೈಸೂರು ರಾಜ್ಯ (ಈಗಿನ ಕರ್ನಾಟಕ) ನಿರ್ಮಾಣವಾದ ದಿನವನ್ನು ಗೌರವಿಸಲು ರಾಜ್ಯೋತ್ಸವ ಆಚರಿಸಲಾಗುತ್ತದೆ. ದಕ್ಷಿಣ ಭಾರತದ ಎಲ್ಲಾ ಕನ್ನಡ ಭಾಷಿಕ ಪ್ರದೇಶಗಳನ್ನು ವಿಲೀನಗೊಳಿಸಿ ನಿರ್ಮಿಸಲಾದ ಕರ್ನಾಟಕ ನಮ್ಮೆಲ್ಲರ ಹೆಮ್ಮೆ. ಈ ದಿನವನ್ನು ನಾಡಹಬ್ಬವನ್ನಾಗಿ ಆಚರಿಸುವುದು ನಮ್ಮ ಕರ್ತವ್ಯ ಎಂದು ಹೇಳಿದರು. ವಿದ್ಯಾರ್ಥಿಗಳಿಗೆ ಕನ್ನಡ ನಾಡು ನುಡಿಯ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಕಾರ್ಯದರ್ಶಿ ಫಾ.ಸಾಮ್ಯುಯಲ್ ಜಾರ್ಜ್ ಅವರು ಮಾತನಾಡಿ ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಕನ್ನಡ ನಾಡು-ನುಡಿಯ ಗೌರವ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ. ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದ ವಿದ್ಯಾರ್ಥಿನಿ ಅರ್ಚನಾ ಎಸ್ ಅವರ ಸಾಧನೆ ಸಂಸ್ಥೆಗೆ ಹೆಮ್ಮೆ ತಂದಿದೆ ಎಂದು ಪ್ರಶಂಸಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಸನ್ನಿ ಕೆ.ಎಸ್, ಸದಸ್ಯರು, ಉಪನ್ಯಾಸಕರು, ಶಿಕ್ಷಕರು, ಕಚೇರಿ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಭೂಮಿಕಾ ಕಾರ್ಯಕ್ರಮ ನಿರೂಪಿಸಿದರು.






