

ಕೊಕ್ಕಡ: ಉಜಿರೆದಿಂದ ಪೆರಿಯಶಾಂತಿ ಮಾರ್ಗದವರೆಗೆ ವಿಸ್ತರಿಸಿರುವ ಕೊಕ್ಕಡ-ಜೋಡುಮಾರ್ಗ ರಸ್ತೆ ‘ಸ್ಪರ್ ರಸ್ತೆ’ ಎಂಬ ಹೆಸರಿನಲ್ಲಿ ಮೇಲ್ದರ್ಜೆಗೇರಿದರೂ, ಟೆಂಡರ್ ಪ್ರಕ್ರಿಯೆ ಮುಗಿದಿದ್ದರೂ ಇನ್ನೂ ಕೆಲಸವನ್ನು ಆರಂಭಿಸದೆ ಜನಸಾಮಾನ್ಯರ ಬದುಕನ್ನು ಸುಧಾರಿಸುವ ಬದಲು ದುಸ್ತರಗೊಳಿಸಿರುವ ವಾಸ್ತವ ಚಿತ್ರಣ ಇಲ್ಲಿನ ಜನರ ಕಣ್ಣೆದುರು ಮೂಡುತ್ತಿದೆ.
ಉಜಿರೆ ಪೆರಿಯಶಾಂತಿ ನಡುವೆ ಬರುವ ಕೊಕ್ಕಡ-ಜೋಡುಮಾರ್ಗ ಭಾಗದಲ್ಲಿ ಕಳೆದ ಹಲವು ತಿಂಗಳಿಂದ ರಸ್ತೆಯ ಅಸಮರ್ಪಕ ನಿರ್ವಹಣೆ ಹಾಗೂ ಧೂಳಿನ ಆರ್ಭಟ ಜನರ ಜೀವನದ ಭಾಗವಾಗಿ ಬಿಟ್ಟಿದೆ. ದಿನದಿಂದ ದಿನಕ್ಕೆ ಈ ಮಾರ್ಗದಲ್ಲಿ ಓಡಾಡುವ ವಾಹನಗಳಿಂದ ಏರುವ ವಿಪರೀತ ಧೂಳು ಸ್ಥಳೀಯರ ಆರೋಗ್ಯವನ್ನೇ ಹಾಳುಮಾಡಿದೆ.
ಈ ಭಾಗವು ಧರ್ಮಸ್ಥಳ ಹಾಗೂ ಸುಬ್ರಹ್ಮಣ್ಯ ಕ್ಷೇತ್ರಗಳನ್ನು ಸಂಪರ್ಕಿಸುವ ಪ್ರಮುಖ ಮಾರ್ಗವಾಗಿದ್ದು, ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುತ್ತವೆ. ಈ ವಾಹನ ಸಂಚಾರದ ಭಾರದಿಂದಾಗಿ ರಸ್ತೆ ಸಂಪೂರ್ಣ ಹಾಳಾಗಿದೆ. ಮಳೆಗಾಲದ ವೇಳೆ ಚರಂಡಿಗಳ ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ನೀರು ರಸ್ತೆ ಮೇಲೆ ಹರಿದು, ಅಲ್ಲಿ ಹಾಕಿದ ಡಾಂಬರು ಸಂಪೂರ್ಣ ಕಿತ್ತುಹೋಗಿದೆ. ಇದೀಗ ಬೇಸಿಗೆ ಕಾಲ ಆರಂಭವಾಗುತ್ತಿದ್ದಂತೆ, ರಸ್ತೆಯಲ್ಲಿ ಕೇವಲ ಜಲ್ಲಿ ಮಾತ್ರ ಉಳಿದು ಈ ಪ್ರದೇಶದ ಸುತ್ತ ಧೂಳು ಆವರಿಸಿದೆ.
ಈ ಪ್ರದೇಶದ ಬಳಿ ಕಾಲೇಜುಗಳು, ರಸ್ತೆಯ ಎರಡೂ ಬದಿಗಳಲ್ಲಿ ವ್ಯಾಪಾರ ಮಳಿಗೆಗಳು, ಅಂಗಡಿ ಮುಂಗಟ್ಟುಗಳು ಇದ್ದು ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ಪ್ರತಿದಿನ ಈ ಮಾರ್ಗವನ್ನು ಬಳಕೆಯಾಗುತ್ತಿದ್ದಾರೆ. ವಾಹನಗಳ ಸಂಚಾರದ ಸಮಯದಲ್ಲಿ ಏಳುವ ಧೂಳಿನ ಕತ್ತಲಿನಲ್ಲಿ ನಿಲ್ಲುವುದು ಸಹ ಸವಾಲಾಗಿದೆ. ಪ್ರಯಾಣಿಕರು ಬಸ್‌ಗಾಗಿ ಕಾಯುವಾಗ ಉಸಿರಾಡಲು ಕಷ್ಟವಾಗುವಷ್ಟು ಧೂಳು ಹರಡುತ್ತದೆ.
ವ್ಯಾಪಾರಸ್ಥರು ಧೂಳಿನಿಂದ ವ್ಯಾಪಾರ ಮಳಿಗೆಗಳು ಮಸುಕಾಗಿವೆ. ವ್ಯಾಪಾರಿಗಳ ಪ್ರಕಾರ, ಈ ಅಸಹನೀಯ ಪರಿಸ್ಥಿತಿಯಿಂದ ಗ್ರಾಹಕರು ದೂರವಾಗುತ್ತಿದ್ದಾರೆ, ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. ವ್ಯಾಪಾರ ಕುಸಿತಕೊಂಡು ನಷ್ಟ ಅನುಭವಿಸುತ್ತಿದ್ದಾರೆ.
ಇದೀಗ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಗಳಲ್ಲಿ ಜಾತ್ರೆ ಆರಂಭ ಗೊಳ್ಳಲಿದ್ದು, ಸಾವಿರಾರು ಭಕ್ತರು ಈ ಮಾರ್ಗದ ಮೂಲಕ ಸಂಚರಿಸಲಿದ್ದಾರೆ. ಇಂತಹ ಸಮಯದಲ್ಲೂ ಈ ರಸ್ತೆ ಬಾಕಿಯ ಭಾಗಗಳನ್ನು ತೇಪೆ ಕಾರ್ಯ ಮಾಡದೇ ಹಾಗೆಯೇ ಬಿಟ್ಟಿರುವುದು ಜನರಲ್ಲಿ ಯಕ್ಷಪ್ರಶ್ನೆಯಾಗಿದೆ.






