

ಕೊಕ್ಕಡ: ದಶಮಾನ ಆಚರಣೆಯಲ್ಲಿರುವ ನಿಡ್ಲೆ ಪ್ರಾ.ಕೃ.ಪ.ಸಹಕಾರಿ ಸಂಘದ ಆಡಳಿತ ಮಂಡಳಿ ಕಳೆಂಜ ಮತ್ತು ನಿಡ್ಲೆ ಗ್ರಾಮದ ರೈತರಿಗೆ ಎಲ್ಲ ರೂಪದಲ್ಲೂ ನೆರವಾಗುತ್ತಾ ಬಂದಿದೆ. ದ.ಕ.ಜಿಲ್ಲೆ ಅತೀ ಹೆಚ್ಚು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದೆ. ಈ ನಿಟ್ಟಿನಲ್ಲಿ ಶುದ್ಧ ಎಣ್ಣೆ ಬಳಕೆ ಕಾರ್ಯ ಪ್ರೇರಣದಾಯಿ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ನಿಡ್ಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ನ.17 ರಂದು ನಿಡ್ಲೆ ಪ್ರಾ.ಕೃ.ಪ.ಸ.ಸಂಘದ ವಠಾರದಲ್ಲಿ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಅಂಗವಾಗಿ ನಡೆದ ಸಹಕಾರ ಸಪ್ತಾಹ ಆಚರಣೆ ಉದ್ಘಾಟಿಸಿ ಮಾತನಾಡಿದರು.
ಕೃಷಿಕರೇ ಬಂದು ತೆಂಗಿನ ಕಾಯಿಯನ್ನು ನೀಡಿ ಎಣ್ಣೆ ಪಡೆಯುವಂತ ವ್ಯವಸ್ಥೆ ಅಳವಡಿಸಲಾಗಿದೆ. ಇದು ತಾಲೂಕಿನ ಎಲ್ಲ ಸಹಕಾರಿ ಸಂಘದಲ್ಲಿ ಅಳವಡಿಸುವ ಕಾರ್ಯವಾಗಲಿ ಎಂದು ಆಶಿಸುತ್ತೇನೆ. ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರಕಾರ ತಂದ ಫಸಲ್ ಭೀಮ ಯೋಜನೆಯಡಿ ಬೆಳ್ತಂಗಡಿ ತಾಲೂಕಿನ ಕೃಷಿಕರಿಗೆ ಈ ಬಾರಿ 120 ಕೋ.ರೂ. ಲಭ್ಯವಾಗಲಿದೆ. ಬೆಳ್ತಂಗಡಿ ತಾಲೂಕಿನ ರಸ್ತೆಗೆ ಅನುದಾನ ಕೊರತೆಯಿಂದ ಬಾಕಿ ಆಗಿವರ. ಕಳೆಂಜದ ರಸ್ತೆಯನ್ನು ಅತೀ ಶೀಘ್ರದಲ್ಲಿ ಪೂರ್ಣ ಗೊಳಿಸುವ ಭರವಸೆ ನೀಡಿದರು.
ದ.ಕ.ಜಿಲ್ಲಾ ಸಹಕಾರಿ ಬ್ಯಾಂಕಿನ ನಿರ್ದೇಶಕ ಪೂವಾಜೆ ಕುಶಾಲಪ್ಪ ಗೌಡ ಮಾತನಾಡಿ, ಗ್ರಾಮೀಣ ಪ್ರದೇಶದ ಎಲ್ಲ ಕೃಷಿಕರಿಗೆ ಕೈಗೆಟಕುವ ಸಂಸ್ಥೆ. ಸಹಕಾರಿ ಸಂಸ್ಥೆಯಲ್ಲಿ ಕೃಷಿಕರು ತೊಡಗಿಸಿಕೊಂಡರೆ ಆರ್ಥಿಕ ಪ್ರಗತಿಗೆ ಕಾರಣವಾಗುತ್ತದೆ. ರಾಷ್ಟ್ರೀಕೃತ ಬ್ಯಾಂಕ್ ಗಳ ವ್ಯವಸ್ಥೆಯ ಮಧ್ಯೆ ಬಡ ಮಂದಿ ಸದೃಢವಾಗಲು ನಾನಾ ರೀತಿಯ ಸಾಲ ಸೌಲಭ್ಯ ಒದಗಿಸುವಲ್ಲಿ ಸಹಕಾರಿ ಸಂಘಗಳು ಮುಂಚೂಣಿಯಲ್ಲಿದೆ. ಎಲ್ಲ ಸಹಕಾರಿ ಸಂಸ್ಥೆಯ ಸಿಬಂದಿ ಹಾಗೂ ಆಡಳಿತವರ್ಗದ ಜನಸ್ನೇಹಿ ನಡೆಯಿಂದ ಗ್ರಾಮೀರ ಏಳಿಗೆಗೆ ಕಾರಣೀಭೂತವಾಗಿದೆ ಎಂದರು.
ನಿಡ್ಲೆ ಪ್ರಾ.ಕೃ.ಸ.ಸಂಘದ ಉಪಾಧ್ಯಕ್ಷ ಡೀಕಯ್ಯ ಎಂ.ಕೆ., ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪದ್ಮನಾಭ ಗೌಡ, ಕಳೆಂಜ ಗ್ರಾ.ಪಂ. ಉಪಾಧ್ಯಕ್ಷ ವಿಶ್ವನಾಥ ಎಚ್., ನಿಡ್ಲೆ ಗ್ರಾ.ಪಂ.ರುಕ್ಮಯ್ಯ ಪೂಜಾರಿ, ಶಾಲೆತಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘ ಅಧ್ಯಕ್ಷ ವಿಜಯ್ ಕುಮಾರ್, ಶಾಲೆತಡ್ಕ ಹಾಲು ಉತ್ಪಾದಕರ ಸಂಘದ ಉಪಾಧ್ಯಕ್ಷ ಹರೀಶ್ ರಾವ್, ಬರೆಂಗಾಯ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಸುಂದರ ಗೌಡ, ದ.ಕ.ಜಿಲ್ಲಾ ಸಹಕಾರಿ ಸಂಘದ ವಲಯ ಮೇಲ್ವಿಚಾರಕ ಸಿರಾಜುದ್ದೀನ್ ಉಪಸ್ಥಿತರಿದ್ದರು.
ಶಾಸಕ ಹರೀಶ್ ಪೂಂಜ, ಡಿಸಿಸಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ ಪೂವಾಜೆ, ಕಾಯರ್ತಡ್ಕದಲ್ಲಿ 1991 ರಿಂದ ವೈದ್ಯರಾಗಿ ನಿರಂತರ ಸೇವೆ ಸಲ್ಲಿಸುತ್ತಿರುವ ಡಾ.ಟಿ.ವಿ.ಜೋಸೆಫ್ ಹಾಗೂ ನಿಡ್ಲೆ, ಕಳೆಂಜ ಗ್ರಾ.ಪಂ. ಮಾಜಿ ಅಧ್ಯಕ್ಷರಾಗಿ ಸಕ್ರಿಯರಾಗಿ ಸೇವೆ ಸಲ್ಲಿಸಿದ ಟಿ.ಎಸ್.ನಿತ್ಯಾನಂದ ರೈ ಅವರನ್ನು ಸಂಘದ ವತಿಯಿಂದ ಸಮ್ಮಾನಿಸಿ ಗೌರವಿಸಲಾಯಿತು. ಕ್ರಿಶ್ಚಿಯನ್ ಬ್ರದರ್ಸ್ ಸಂಘದ ಅಧ್ಯಕ್ಷ ಆಗಸ್ಟಿನ್ ಟಿ.ಎ., ನಿಸರ್ಗ ಯುವ ಜನೇತರ ಸೇವಾ ಸಂಘದ ಅಧ್ಯಕ್ಷ ಪುನೀತ್ ಬರೆಂಗಾಯ ಅವರನ್ನು ಗೌರವಿಸಲಾಯಿತು.
ನಿಡ್ಲೆ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಧನಂಜಯ ಗೌಡ ಪ್ರಾಸ್ತಾವಿಸಿದರು. ನಿರ್ದೇಶಕ ರಮೇಶ್ ರಾವ್ ಕೆ. ಸ್ವಾಗತಿಸಿದರು. ಸಿಬಂದಿ ಯೋಗೀಶ್ವರಿ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕಿ ವಿಜಯಲಕ್ಷ್ಮೀ ವಂದಿಸಿದರು.
72 ನೇ ವರ್ಷದ ಸಹಕಾರಿ ಸಪ್ತಾಹದಂಗವಾಗಿ ಹಾಗೂ ನಿಡ್ಲೆ ಸಂಘವು 10 ವರ್ಷ ಪೂರೈಸಿದ ಹಿನ್ನೆಲೆ ಸಹಕಾರಿ ಧ್ವಜಾವರಣಗೊಳಿಸಿ, ಕೇಂದ್ರ ಕಚೇರಿಯಲ್ಲಿ ರೈತರಿಗೆ ಅನುಕೂಲವಾಗುವಂತೆ ಸಂಘದಲ್ಲಿ ನೂತನವಾಗಿ ನಿರ್ಮಿಸಿದ ತೆಂಗಿನ ಎಣ್ಣೆಯ ಗಿರಣಿ ಯಂತ್ರವನ್ನು ಶಾಸಕ ಹರೀಶ್ ಪೂಂಜ ಉದ್ಘಾಟಿಸಿದರು.






