ರೂ.5.65 ಲಕ್ಷ ಮೌಲ್ಯದ ಚಿನ್ನಾಭರಣ–ದ್ವಿಚಕ್ರ ವಾಹನ ವಶಪಡಿಸಿಕೊಂಡ ವೇಣೂರು ಪೊಲೀಸರು


ಬೆಳ್ತಂಗಡಿ: ದಕ್ಷಿಣ ಕನ್ನಡದಲ್ಲಿ ಮಾತ್ರವಲ್ಲ, ಹಲವು ಜಿಲ್ಲೆ–ರಾಜ್ಯಗಳಲ್ಲಿ ಕಳವು ಪ್ರಕರಣಗಳಿಂದ ತಲೆನೋವಾಗಿ ಪರಿಣಮಿಸಿದ್ದ ಕುಖ್ಯಾತ ಕಳ್ಳ ಅಬುಬಕ್ಕರ್ @ ಅಬ್ದುಲ್ ಖಾದರ್ @ ಇತ್ತೆ ಬರ್ಪೆ ಅಬುಬಕ್ಕರ್(70) ಎಂಬಾತನನ್ನು ವೇಣೂರು ಪೊಲೀಸರು ದಸ್ತಗಿರಿ ಮಾಡಿ ಬಂಧಿಸಿದ್ದಾರೆ. ಆರೋಪಿತನಿಂದ ರೂ.5,65,000 ಮೌಲ್ಯದ 56.850 ಗ್ರಾಂ ಚಿನ್ನಾಭರಣಗಳು ಹಾಗೂ ರೂ.60,000 ಮೌಲ್ಯದ ಕಳವು ದ್ವಿಚಕ್ರ ವಾಹನ ಸಹ ವಶಪಡಿಸಿಕೊಳ್ಳಲಾಗಿದೆ.
ದಿನಾಂಕ 02.10.2025 ರಿಂದ 06.10.2025 ರ ನಡುವೆ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಕುತ್ಲೂರು ಪ್ರದೇಶದಲ್ಲಿರುವ ಬೀಗ ಹಾಕಿದ್ದ ಮನೆಯೊಂದರಲ್ಲಿ ನಡೆದ 149 ಗ್ರಾಂ ತೂಕದ, ಒಟ್ಟು ರೂ. 9.50 ಲಕ್ಷ ಮೌಲ್ಯದ ಚಿನ್ನಾಭರಣಗಳ ಮನೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಹೊರ ರಾಜ್ಯ ಹಾಗೂ ಅನೇಕ ಜಿಲ್ಲೆಗಳಲ್ಲಿ ಸುಮಾರು 40 ಕ್ಕೂ ಅಧಿಕ ಕಳವು ಪ್ರಕರಣಗಳಲ್ಲಿ ತೊಡಗಿದ್ದ ಆರೋಪಿತ ಅಬುಬಕ್ಕರ್ ಅನ್ನು ದಸ್ತಗಿರಿ ಮಾಡಿದರು. ವಿಚಾರಣೆ ವೇಳೆ ಚಿನ್ನಾಭರಣಗಳು ಹಾಗೂ ದ್ವಿಚಕ್ರ ವಾಹನವನ್ನು ಕಳವು ಮಾಡಿರುವ ಬಗ್ಗೆ ಆತ ಒಪ್ಪಿಕೊಂಡಿದ್ದು, ವಸ್ತುಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ. ಆರೋಪಿತನನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಬೆಳ್ತಂಗಡಿ ಡಿ.ವೈ.ಎಸ್.ಪಿ. ರೋಹಿಣಿ ಸಿ.ಕೆ. ರವರ ಮಾರ್ಗದರ್ಶನದಲ್ಲಿ, ಬೆಳ್ತಂಗಡಿ ವೃತ್ತ ನಿರೀಕ್ಷಕರಾದ ಬಿ.ಜಿ. ಸುಬ್ಬಾಪುರ ಮಠ ರವರ ತಂಡ, ವೇಣೂರು ಪೊಲೀಸ್ ಠಾಣೆಯ ಪಿಎಸ್ಐ ಅಕ್ಷಯ್ ಡವಗಿ, ಓಮನ ಎನ್., ಎಎಸ್‌ಐಗಳು ವೆಂಕಟೇಶ್ ನಾಯ್ಕ, ಬೆನ್ನಿಚ್ಚನ್, ಹೆಚ್.ಸಿ ಕೃಷ್ಣ, ಪ್ರಶಾಂತ್, ಪಿಸಿ ಚರಣ್, ಬಸವರಾಜ್, ಮೋಹನ್, ಎಂಪಿಸಿ ಜಯಶ್ರೀ, ಪೂಂಜಾಲಕಟ್ಟೆ ಪೊಲೀಸ್ ಠಾಣೆಯ ಪಿಸಿ ರಜಿತ್, ಜೊತೆಗೆ ಮಂಗಳೂರು ಜಿಲ್ಲಾ ಕಂಪ್ಯೂಟರ್ ವಿಭಾಗದ ಸಿಬ್ಬಂದಿಗಳಾದ ಸಂಪತ್ ಹಾಗೂ ದಿವಾಕರ ಪ್ರಮುಖ ಪಾತ್ರವಹಿಸಿದ್ದಾರೆ.






