

ನೆಲ್ಯಾಡಿ: ಶಿರಾಡಿ ಗ್ರಾಮದಲ್ಲಿ ರೈತನೊಬ್ಬನ ತೋಟದಲ್ಲಿದ್ದ ಮೂರು ಸಬ್‌ಮರ್ಸಿಬಲ್ ಪಂಪುಸೆಟ್‌ಗಳನ್ನು ಕಳ್ಳರು ಕದ್ದೊಯ್ದಿರುವ ಘಟನೆ ಬೆಳಕಿಗೆ ಬಂದಿದೆ. ಕಳವಾದ ಪಂಪುಗಳ ಒಟ್ಟು ಮೌಲ್ಯ ಸುಮಾರು ₹1,15,000 ಆಗಿದ್ದು, ರೈತನಿಗೆ ಭಾರೀ ಆರ್ಥಿಕ ನಷ್ಟವಾಗಿದೆ.
ದಿವಾಕರ ಎಸ್.ಎ(66) ಎಂಬವರು ಶಿರಾಡಿ ಗ್ರಾಮದಲ್ಲಿ ಅಡಿಕೆ, ತೆಂಗು ಹಾಗೂ ರಬ್ಬರ್ ತೋಟ ಹೊಂದಿರುವ ಕೃಷಿಕರು. ಮಳೆಗಾಲದಲ್ಲಿ ನದಿ ತುಂಬಿ ಹರಿಯುವ ಸಂದರ್ಭ ಪಂಪುಸೆಟ್ ನೀರು ಮುಳುಗುವ ಆತಂಕವಿರುವುದರಿಂದ ಪ್ರತಿವರ್ಷದಂತೆ ಈ ಬಾರಿ ಕೂಡ ಅವರು ಪಂಪುಗಳನ್ನು ಮೇಲಕ್ಕೆತ್ತಿ ತೋಟದೊಳಗೆ ಸುರಕ್ಷಿತವಾಗಿ ಇರಿಸಿದ್ದರು.
ಅ.20ರಂದು ತೋಟಕ್ಕೆ ಭೇಟಿ ನೀಡಿದಾಗ 7.5 ಎಚ್.ಪಿ ಸಾಮರ್ಥ್ಯದ ಎರಡು ಪಂಪು ಮತ್ತು 5 ಎಚ್.ಪಿ ಪಂಪು ಒಂದು ಸ್ಥಳದಲ್ಲಿತ್ತು. ಆದರೆ ನ.17ರಂದು ಬೆಳಿಗ್ಗೆ 10:30ಕ್ಕೆ ತೋಟಕ್ಕೆ ಹೋದಾಗ ಎಲ್ಲ ಮೂರು ಪಂಪುಸೆಟ್‌ಗಳೂ ಸ್ಥಳದಿಂದ ಕಾಣೆಯಾಗಿದ್ದವು. ತೋಟದ ಸುತ್ತಮುತ್ತಲ ಪ್ರದೇಶ ಹಾಗೂ ನೆರೆಮನೆಗಳಲ್ಲಿ ವಿಚಾರಣೆ ನಡೆಸಿದರೂ ಯಾವುದೇ ಸುಳಿವು ಲಭಿಸಲಿಲ್ಲ. ತೋಟದೊಳಗೆ ನುಗ್ಗಿದ ಕಳ್ಳರು ಪಂಪುಗಳನ್ನು ಹೊತ್ತೊಯ್ದಿದ್ದಾರೆ ಎಂದು ಶಂಕಿಸಲಾಗಿದೆ.
ಕಳವಾದ ಸಾಮಾನುಗಳ ವಿವರ,ಅಂದಾಜು ಮೌಲ್ಯ ಡೆಕ್ಕನ್ ಕಂಪೆನಿ 7.5 ಎಚ್.ಪಿ ಸಬ್‌ಮರ್ಸಿಬಲ್ ಪಂಪು: ₹40,000, ಡೆಕ್ಕನ್ ಕಂಪೆನಿ 7.5 ಎಚ್.ಪಿ ಸಬ್‌ಮರ್ಸಿಬಲ್ ಪಂಪು: ₹40,000, ಡೆಕ್ಕನ್ ಕಂಪೆನಿ 5 ಎಚ್.ಪಿ ಸಬ್‌ಮರ್ಸಿಬಲ್ ಪಂಪು ₹35,000 ಒಟ್ಟು ನಷ್ಟ: ₹1,15,000
ಈ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.






