

ಬೆಳ್ತಂಗಡಿ: ಅಸಮಾನತೆಯ ಸಮಾಜದಲ್ಲಿ ಸರ್ವರಿಗೂ ಸಮಾನತೆ, ಸಾಮಾಜಿಕ ಹಾಗೂ ಆರ್ಥಿಕ ನ್ಯಾಯ ಒದಗಿಸಿದ ಮಹತ್ವದ ಗ್ರಂಥವೇ ನಮ್ಮ ಭಾರತೀಯ ಸಂವಿಧಾನ. ಸಂವಿಧಾನದಲ್ಲಿರುವ ಮೌಲ್ಯಗಳು ಇಂದಿನ ಭಾರತಕ್ಕೆ ಅತ್ಯಂತ ಅಗತ್ಯ. ಭವಿಷ್ಯದ ಭಾರತೀಯರು ಸಂವಿಧಾನದ ಆಶಯಗಳನ್ನು ಕಾಪಾಡಿ ಮುಂದಕ್ಕೆ ಒಯ್ಯುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ನೆಹರು ಚಿಂತನ ಕೇಂದ್ರದ ಸಂಶೋಧನಾ ಸಹಾಯಕಿ ಡಾ. ನಯನ ಕೃಷ್ಣಾಪುರ ಅಭಿಮತ ವ್ಯಕ್ತಪಡಿಸಿದರು.
ಅವರು ಬೆಳ್ತಂಗಡಿಯ ಶ್ರೀ ಮಂಜುನಾಥ ಕಲಾ ಭವನದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ್, ಪಟ್ಟಣ ಪಂಚಾಯತ್ ಹಾಗೂ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡುತ್ತಿದ್ದರು.
ಜಿಲ್ಲಾ ಕೆಡಿಪಿ ಸದಸ್ಯ ಹಾಗೂ ನ್ಯಾಯವಾದಿ ಸಂತೋಷ್ ಕುಮಾರ್ ಲಾಯಿಲ ಮಾತನಾಡಿ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸ್ವತಂತ್ರವಾಗಿ ಬದುಕುವ ಹಕ್ಕನ್ನು ಸಂವಿಧಾನ ನೀಡಿದೆ. ಆದರೆ ಇಂದು ನಾವು ತಿನ್ನುವ ಊಟವನ್ನೇ ಇತರರು ನಿರ್ಧರಿಸುವಂತಾಗಿದೆ. ಬಹು ಆಹಾರ ಸಂಸ್ಕೃತಿ ನಮ್ಮ ಬಹು ಸಂಸ್ಕೃತಿಯ ಭಾಗ. ಅದನ್ನು ಆಯ್ಕೆ ಮಾಡುವುದು ನಾಗರಿಕರ ಮೂಲಭೂತ ಹಕ್ಕು. ಸಂವಿಧಾನ ಯಾರ ಮೇಲೂ ಹೇರಿಕೆಯಾಗಿಲ್ಲ; ಬದಲಾಗಿ ನಮಗೆ ನಾವೇ ಅರ್ಪಿಸಿಕೊಂಡಿರುವ ಸಂವಿಧಾನ ನಮ್ಮ ದೇಶದ ಸಂವಿಧಾನ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮವನ್ನು ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಭವಾನಿ ಶಂಕರ್ ಉದ್ಘಾಟಿಸಿದರು.
ವೇದಿಕೆಯಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಶೇಖರ್ ಕುಕ್ಕೇಡಿ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಪದ್ಮನಾಭ ಸಾಲಿಯಾನ್, ಉಪ ತಹಶೀಲ್ದಾರ್ ಜಯಾ, ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಧನಂಜಯ ಉಪಸ್ಥಿತರಿದ್ದರು.
ಕಾರ್ಯಕ್ರಮದ ಪೂರ್ವಭಾವಿಯಾಗಿ ತಾಲೂಕು ಆಡಳಿತ ಸೌಧದಿಂದ ಕಲಾ ಭವನದವರೆಗೆ ಸಂವಿಧಾನ ಸಂರಕ್ಷಣಾ ಜಾಥಾ ನಡೆಯಿತು. ಕಾರ್ಯಕ್ರಮದ ಅಂಗವಾಗಿ ನಡೆದ ವಿಭಿನ್ನ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿ–ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಣೆ ಮಾಡಲಾಯಿತು.
ಮುಖ್ಯ ಭಾಷಣಕಾರರಾದ ಡಾ.ನಯನ ಕೃಷ್ಣಾಪುರ ಅವರಿಗೆ ಸನ್ಮಾನ ಸಲ್ಲಿಸಲಾಯಿತು.
ಮುಂಡಾಜೆ ಮೊರಾರ್ಜಿ ದೇಸಾಯಿ ವಸತಿಶಾಲೆಯ ಪ್ರಾಂಶುಪಾಲ ಮುರಳೀಧರ್ ಜಿ.ಎಸ್ ಸ್ವಾಗತಿಸಿದರು, ಶಿಕ್ಷಕ–ಸಾಹಿತಿ ಅರವಿಂದ ಚೊಕ್ಕಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಐಟಿಡಿಪಿ ವಿಸ್ತಾರಣಾಧಿಕಾರಿ ಹೇಮಾಲತಾ ಕಾರ್ಯಕ್ರಮ ನಿರೂಪಿಸಿದರು, ತಾಲೂಕು ಪಂಚಾಯತ್ ಸಂಯೋಜಕ ಜಯಾನಂದ ಲಾಯಿಲ ವಂದಿಸಿದರು.






