ಉಪ್ಪಿನಂಗಡಿ ಉಪವಲಯ ಅರಣ್ಯಾಧಿಕಾರಿಗೆ ದೂರು ಸಲ್ಲಿಕೆ


ಕೊಕ್ಕಡ: ಶಿಶಿಲ ಗ್ರಾಮದ ಕಳೆಂಜದ ಸರ್ವೆ ನಂಬರ್ 309ಕ್ಕೆ ಸಂಬಂಧಿಸಿದಂತೆ ಶಿಶಿಲ ಭಾಗದ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆಯವರು ನಡೆಸುತ್ತಿರುವ ಸರ್ವೆ ಕಾರ್ಯ ಇದೀಗ ತೀವ್ರ ವಿವಾದಕ್ಕೆ ಕಾರಣವಾಗಿದೆ. ಕಂದಾಯ ಇಲಾಖೆಯಿಂದ ಸರಕಾರದ ಆದೇಶದಂತೆ ಮಂಜೂರಾಗಿರುವ ಪಟ್ಟ ಜಮೀನುಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಭೂಮಿಯೆಂದು ಪರಿಗಣಿಸಿ ಸರ್ವೆ ನಡೆಸಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಶಿಶಿಲ ಗ್ರಾಮದ ಹೊಳೆಗಂಡಿ ಹಾಗೂ ದೇನೋಡಿ ಭಾಗದಲ್ಲಿ ಒಟ್ಟು 80 ಕುಟುಂಬಗಳಿಗೆ 1966ರಲ್ಲಿ ‘ಅಕ್ರಮ–ಸಕ್ರಮ’ ಯೋಜನೆಯಡಿ ಭೂಮಿ ಮಂಜೂರಾಗಿದ್ದು, ಈ ಜಮೀನುಗಳು ಅರಣ್ಯ ಇಲಾಖೆಯಿಂದ ಕಂದಾಯ ಇಲಾಖೆಗೆ ಅಧಿಕೃತವಾಗಿ ವಿಂಗಡಣೆಗೊಂಡ ಭೂಮಿಯಾಗಿವೆ ಎಂದು ಗ್ರಾಮಸ್ಥರು ಸ್ಪಷ್ಟಪಡಿಸಿದ್ದಾರೆ. ಇಂತಹ ಸರಕಾರದಿಂದ ಮಾನ್ಯತೆ ಪಡೆದ ಭೂಮಿಯನ್ನು ಸರ್ವೆ ನಡೆಸಿರುವುದು ಸರಕಾರದ ಆದೇಶಗಳಿಗೆ ವಿರುದ್ಧವಾಗಿದೆ ಎಂಬ ಆರೋಪ ಕೇಳಿಬಂದಿದೆ.
ಗ್ರಾಮಸ್ಥರ ಆರೋಪದಂತೆ, ಯಾವುದೇ ಪೂರ್ವ ಮಾಹಿತಿ ಅಥವಾ ನೋಟಿಸ್ ನೀಡದೆ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಯ ಜಂಟಿಯಲ್ಲಿ ಸರ್ವೆ ಅಧಿಕಾರಿಗಳು ದೇನೋಡಿ ಭಾಗದ ಮಂಜೂರಾದ ಜಮೀನಿಗೆ ಅಕ್ರಮವಾಗಿ ಪ್ರವೇಶಿಸಿ ಸರ್ವೆ ನಡೆಸಿದ್ದಾರೆ. ಅಲ್ಲದೆ ನಡೆಸಿರುವ ಸರ್ವೆ ಕಾರ್ಯವೂ ಅಸಮರ್ಪಕವಾಗಿದ್ದು, ಪಟ್ಟದಾರರ ಹಕ್ಕುಗಳಿಗೆ ಧಕ್ಕೆಯಾಗುವ ರೀತಿಯಲ್ಲಿ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಬೇಸತ್ತ ಶಿಶಿಲ ಗ್ರಾಮಸ್ಥರು ಉಪ್ಪಿನಂಗಡಿ ಉಪವಲಯ ಅರಣ್ಯಾಧಿಕಾರಿ ಅವರಿಗೆ ಲಿಖಿತ ದೂರು ಸಲ್ಲಿಸಿದ್ದು, ಸರಕಾರದಿಂದ ಮಂಜೂರಾಗಿರುವ ಜಾಗಗಳನ್ನು ಹೊರತುಪಡಿಸಿ ಅರಣ್ಯ ಇಲಾಖೆಯು ತನ್ನ ಮೂಲ ಅರಣ್ಯ ಭಾಗವನ್ನು ಮಾತ್ರ ಸರ್ವೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಮುಂದಿನ ದಿನಗಳಲ್ಲಿ ಶಿಶಿಲ ಭಾಗದಲ್ಲಿ ಸರಕಾರದಿಂದ ಮಂಜೂರಾಗಿರುವ ಭೂಮಿಗೆ ಯಾವುದೇ ರೀತಿಯ ಸರ್ವೆ ಕಾರ್ಯ ನಡೆಸಿದರೆ ತೀವ್ರ ಆಕ್ಷೇಪಣೆ ಇರುತ್ತದೆ ಎಂದು ಉಪವಲಯಾರಣ್ಯಧಿಕಾರಿಗೆ ನೀಡಿರುವ ಪತ್ರದಲ್ಲಿ ಶಿಶಿಲ ಗ್ರಾಮಸ್ಥರ ಉಲ್ಲೇಖಿಸಿದ್ದಾರೆ.






