ನಿಡ್ಲೆ ಕುದ್ರಾಯದ ತಿರುವಿನಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್, ಖಾಸಗಿ ಮಿನಿ ಬಸ್ ಡಿಕ್ಕಿ

ಶೇರ್ ಮಾಡಿ

ಐದು ಮಂದಿಗೆ ಗಾಯ – ಎರಡೂ ವಾಹನಗಳ ಮುಂಭಾಗ ಜಖಂ

ಕೊಕ್ಕಡ: ಬೆಳ್ತಂಗಡಿ ತಾಲೂಕು ನಿಡ್ಲೆ ಗ್ರಾಮದ ಕುದ್ರಾಯದ ತಿರುವು ರಸ್ತೆ ಬಳಿ ಸೋಮವಾರ ಬೆಳಿಗ್ಗೆ ನಡೆದ ರಸ್ತೆ ಅಪಘಾತದಲ್ಲಿ ಖಾಸಗಿ ಮಿನಿ ಬಸ್ ಹಾಗೂ ಕೆಎಸ್‌ಆರ್‌ಟಿಸಿ ಬಸ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಐದು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.

ಧರ್ಮಸ್ಥಳ ದೇವರ ದರ್ಶನ ಮುಗಿಸಿ ಕೊಕ್ಕಡ ಕಡೆಗೆ ತೆರಳುತ್ತಿದ್ದ ಖಾಸಗಿ ಮಿನಿ ಬಸ್ ಗೆ, ನಿಡ್ಲೆ ಕುದ್ರಾಯದ ತಿರುವು ರಸ್ತೆ ಬಳಿ ತಲುಪುತ್ತಿದ್ದಂತೆಯೇ ಕೊಕ್ಕಡ ಕಡೆಯಿಂದ ಧರ್ಮಸ್ಥಳ ಕಡೆಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಖಾಸಗಿ ಮಿನಿ ಬಸ್ಸಿನಲ್ಲಿದ್ದ ಧನರಾಜ್ ಎಂಬವರ ಬಲಕಾಲಿನ ಮೊಣಗಂಟಿಗೆ ತರಚಿದ ಗಾಯ ಹಾಗೂ ಬಲಭುಜಕ್ಕೆ ಗುದ್ದಿದ ಗಾಯ ಸಂಭವಿಸಿದ್ದು, ಖಾಸಗಿ ಮಿನಿ ಬಸ್ ಚಾಲಕ ಚಂದನ್ ಅವರಿಗೆ ಎಡಕೋಲು ಕಾಲಿಗೆ ಗುದ್ದಿದ ಗಾಯ ಆಗಿದೆ. ಸಹಪ್ರಯಾಣಿಕರಾದ ಮಂಜುನಾಥ್ ಅವರಿಗೆ ಮೂಗು, ತುಟಿ ಹಾಗೂ ಹಣೆಗೆ ತರಚಿದ ರಕ್ತಗಾಯಗಳ ಜೊತೆಗೆ ಬಲಕಾಲಿನ ಮೊಣಗಂಟಿಗೆ ಗುದ್ದಿದ ಗಾಯ ಆಗಿದ್ದು, ವಿಕಾಸ್ ಅವರಿಗೆ ಮೂಗಿಗೆ ತರಚಿದ ರಕ್ತಗಾಯ ಹಾಗೂ ಬಲಕಣ್ಣಿನ ಬಳಿ ಗುದ್ದಿದ ಗಾಯ ಸಂಭವಿಸಿದೆ. ಇನ್ನೊಬ್ಬ ಸಹಪ್ರಯಾಣಿಕ ಕುಮಾರ್ ಶೆಟ್ಟಿ ಅವರಿಗೆ ತಲೆಗೆ ಗುದ್ದಿದ ರಕ್ತಗಾಯ ಹಾಗೂ ಬೆನ್ನಿಗೆ ಗುದ್ದಿದ ಗಾಯ ಆಗಿರುವುದಾಗಿ ವರದಿಯಾಗಿದೆ.

ಅಪಘಾತದ ಬಳಿಕ ಸ್ಥಳದಲ್ಲಿ ಸೇರಿದ ಸಾರ್ವಜನಿಕರು ಹಾಗೂ ಇತರ ಸಹಪ್ರಯಾಣಿಕರು ಗಾಯಾಳುಗಳನ್ನು ತಕ್ಷಣವೇ ರಕ್ಷಿಸಿ, ಖಾಸಗಿ ಅಂಬ್ಯುಲೆನ್ಸ್ ಮೂಲಕ ಉಜಿರೆಯ ಬೆನಕ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಇದೇ ವೇಳೆ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿದ್ದ ಇಬ್ಬರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದೆ.

ಅಪಘಾತದಿಂದ ಎರಡೂ ವಾಹನಗಳ ಮುಂಭಾಗ ಗಂಭೀರವಾಗಿ ಜಖಂ ಆಗಿದ್ದು, ಸಂಚಾರಕ್ಕೆ ಕೆಲಕಾಲ ಅಡಚಣೆ ಉಂಟಾಯಿತು. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

  •  

Leave a Reply

error: Content is protected !!