

ಕೊಕ್ಕಡ: ಅರಸಿನಮಕ್ಕಿ ಸರ್ಕಾರಿ ಪ್ರೌಢಶಾಲೆಯ ಹಳೆಯ ಶಾಲಾ ಕಟ್ಟಡದ ದುರಸ್ತಿ ಹಾಗೂ ಬಣ್ಣ ಹಚ್ಚುವ ಕಾರ್ಯವು ಡಿ.13ರಂದು ಹಳೆಯ ವಿದ್ಯಾರ್ಥಿಗಳ ಸಹಕಾರದಿಂದ ಯಶಸ್ವಿಯಾಗಿ ನಡೆಯಿತು. ಶಾಲೆಯ ಹಿರಿಯ ವಿದ್ಯಾರ್ಥಿಯಾಗಿರುವ ಶಿಶಿಲದ ಮುಕುಂದ ದಾಮ್ಲೆ ಅವರು ತಮ್ಮ ಸಾಫ್ರಾನ್ ಟೆಕ್ನಾಲಜಿ ಸಾಫ್ಟ್‌ವೇರ್ ಸಂಸ್ಥೆಯ ವೃತ್ತಿ ಸ್ನೇಹಿತರ ತಂಡದೊಂದಿಗೆ ಶಾಲಾ ಕಟ್ಟಡದ ಕಿಟಕಿ–ಬಾಗಿಲುಗಳಿಗೆ ಬಣ್ಣ ಹಚ್ಚಿ ಹೊಸ ಮೆರುಗು ನೀಡಿದರು.
ಸರಕಾರಿ ಶಾಲೆಗಳ ಉಳಿವು ಮತ್ತು ಅಭಿವೃದ್ಧಿಯ ಮಹದಾಸೆಯನ್ನು ಹೊತ್ತ ಈ ತಂತ್ರಜ್ಞರ ತಂಡವು ಬೆಂಗಳೂರಿನಿಂದ ಅರಸಿನಮಕ್ಕಿಗೆ ಆಗಮಿಸಿ ಶ್ರಮದಾನ ಮಾಡುವ ಮೂಲಕ ಮಾದರಿ ಕಾರ್ಯಕ್ಕೆ ಕೈ ಹಾಕಿರುವುದು ಶ್ಲಾಘನೀಯವಾಗಿದೆ. ಜೊತೆಗೆ, ಇಂದಿನ ಮಕ್ಕಳ ಕಲಿಕೆಗೆ ಅಗತ್ಯವಾದ ನಾಲ್ಕು ಕಂಪ್ಯೂಟರ್ ಡೆಸ್ಕ್ ಟಾಪ್‌ಗಳನ್ನು ದೇಣಿಗೆಯಾಗಿ ನೀಡುವ ಮೂಲಕ ಕಲಿಕೆಯ ವಾತಾವರಣವನ್ನು ಇನ್ನಷ್ಟು ಸುಧಾರಿಸಲು ಮುಕುಂದ ದಾಮ್ಲೆ ಅವರು ಸಹಕರಿಸಿದ್ದಾರೆ.
ಈ ಸಂದರ್ಭದಲ್ಲಿ ಖ್ಯಾತ ಅಂತರಾಷ್ಟ್ರೀಯ ಕಲಾವಿದ ಹಾಗೂ ಪರಿಸರ ಪ್ರೇಮಿ, ಮಂಗಳೂರಿನ ಸಹ್ಯಾದ್ರಿ ಸಂಚಯದ ಸಂಚಾಲಕ ದಿನೇಶ್ ಹೊಳ್ಳೆ ಅವರು ಪಶ್ಚಿಮ ಘಟ್ಟಗಳ ಉಳಿವಿನ ಕುರಿತು ಜಾಗೃತಿ ಸಂವಾದವನ್ನು ನಡೆಸಿಕೊಟ್ಟರು. ಪಶ್ಚಿಮ ಘಟ್ಟಗಳ ಸಂರಕ್ಷಣೆಯ ಅಗತ್ಯತೆಯನ್ನು ವಿದ್ಯಾರ್ಥಿಗಳ ಮನಮುಟ್ಟುವಂತೆ ಈ ಕಾರ್ಯಕ್ರಮ ಮಹತ್ತರ ಪರಿಣಾಮಕಾರಿಯಾಗಿತ್ತು. ನಂತರ ಅವರು ವಿದ್ಯಾರ್ಥಿಗಳಿಗಾಗಿ ಅಕ್ಷರ ವಿನ್ಯಾಸ ಹಾಗೂ ಕೈಬರಹ ಸುಧಾರಣೆಯ ಕಾರ್ಯಾಗಾರವನ್ನು ನಡೆಸಿ, ಸುಲಭವಾಗಿ ಕಲಾಕೃತಿಗಳನ್ನು ರೂಪಿಸುವ ನೂತನ ವಿಧಾನಗಳನ್ನು ಪರಿಚಯಿಸಿದರು. ಇದು ವಿದ್ಯಾರ್ಥಿಗಳ ಮೌಲ್ಯಯುತ ಕಲಿಕೆಗೆ ಸಹಾಯಕವಾಯಿತು.
ಕಾರ್ಯಕ್ರಮದಲ್ಲಿ ಹಿರಿಯ ವಿದ್ಯಾರ್ಥಿ ಸಮಿತಿಯ ಅಧ್ಯಕ್ಷ ವಾಮನ ತಾಮನ್ಕರ್, ಶ್ರೀರಂಗ ದಾಮ್ಲೆ, ಅವಿನಾಶ್ ಭಿಡೆ ಹಾಗೂ ಶಾಲಾ ಮುಖ್ಯಶಿಕ್ಷಕಿ ಮಂಜುಳಾ, ಮೀನಾಕ್ಷಿ, ಶ್ರೀಚೇತನಾ ಬಿ.ಎಂ., ಚೇತನಾ ಕುಮಾರಿ, ದಿವ್ಯ ಮತ್ತು ಸುಧೀಂದ್ರ ಉಪಸ್ಥಿತರಿದ್ದರು.






