


ನೆಲ್ಯಾಡಿ: ಕ್ರೈಸ್ತ ಧರ್ಮದ ಸಾರವೇ ಪರಸ್ಪರ ಪ್ರೀತಿ, ಸಹಬಾಳ್ವೆ ಹಾಗೂ ಮಾನವೀಯತೆ ಎಂದು ಹೇಳಿದ ಹೊನ್ನಾವರ ಮಿಷನ್‌ನ ಬಿಷಪ್ ಎಚ್.ಜಿ.ಯಾಕೋಬ್ ಮಾರ್ ಅಂತೋನಿಸ್, “ಯೇಸು ಕ್ರಿಸ್ತನು ಎಲ್ಲಾ ಜನರನ್ನು ಒಟ್ಟಾಗಿ ಸೇರಿಸುವ ಸಂದೇಶದೊಂದಿಗೆ ಈ ಲೋಕಕ್ಕೆ ಬಂದವರು. ದೇವರ ಪುತ್ರನ ಜನನವು ಮಾನವ ಕುಲಕ್ಕೆ ಪ್ರೀತಿಯ ಮಹತ್ವದ ಸಂದೇಶವನ್ನು ನೀಡಿದೆ. ಇಂದಿನ ಸಮಾಜದಲ್ಲಿ ಸ್ನೇಹ ಮತ್ತು ಪ್ರೀತಿ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ, ಯೇಸುವಿನ ಜೀವನ ನಮಗೆ ಪರಸ್ಪರ ಪ್ರೀತಿಯಿಂದ ಬದುಕುವ ದಾರಿಯನ್ನು ತೋರಿಸುತ್ತದೆ” ಎಂದು ಹೇಳಿದರು.

ಅವರು ಭಾನುವಾರ ನೆಲ್ಯಾಡಿ ಗಾಂಧಿ ಮೈದಾನದಲ್ಲಿ ನಡೆದ ಯುನೈಟೆಡ್ ಕ್ರಿಸ್ಮಸ್ ಆಚರಣೆ–2025 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. “ದೇವರು ಲೋಕಕ್ಕೆ ನೀಡಿದ ದೊಡ್ಡ ಬಹುಮಾನವೇ ಯೇಸು ಕ್ರಿಸ್ತ. ನಮ್ಮ ರಕ್ಷಣೆಗಾಗಿ ಅವರು ಈ ಭೂಮಿಗೆ ಜನಿಸಿದರು. ಈ ಕ್ರಿಸ್ಮಸ್ ಸಂದರ್ಭದಲ್ಲಿ ನಾವು ಬಲಹೀನರಿಗೆ ಸಹಾಯ ಹಸ್ತ ನೀಡಿದಾಗ ಮಾತ್ರ ದೇವರ ಮಕ್ಕಳಾಗಲು ಸಾಧ್ಯ. ಒಳ್ಳೆಯ ಮನುಷ್ಯರಾಗಿ ಬದುಕುವುದೇ ಕ್ರಿಸ್ಮಸ್‌ನ ನಿಜವಾದ ಸಂದೇಶ” ಎಂದರು.

ಪುತ್ತೂರು ಡಿಯೋಸಿಸ್‌ನ ಬಿಷಪ್ ಎಚ್.ಜಿ.ಗೀವರ್ಗೀಸ್ ಮಾರ್ ಮಕರಿಯೋಸ್ ಕ್ರಿಸ್ಮಸ್ ಸಂದೇಶ ನೀಡಿ ಮಾತನಾಡಿ, “ಕ್ರಿಸ್ತ ಜಯಂತಿ ಒಂದು ಸತ್ಯ, ಒಂದು ಜೀವನ, ಒಂದು ಸಮರ್ಪಣೆ ಮತ್ತು ದೇವರ ಮಹಾನ್ ವರದಾನ. ದೇವರು ನಮ್ಮೊಡನೆ ಆದ ಮಹತ್ವದ ಘಟನೆ ಕ್ರಿಸ್ಮಸ್. ಯೇಸು ದೇವರು ಮಾನವನಾಗಿ ಈ ಭೂಮಿಯಲ್ಲಿ ಜನ್ಮ ತಾಳಿ ನಮ್ಮೊಡನೆ ಜೀವಿಸಿ ಮಾನವೀಯತೆಯ ಮಿತಿಗಳನ್ನು ಮೀರಿ ಮಾನವ ಮೌಲ್ಯಗಳನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದರು” ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುನೈಟೆಡ್ ಕ್ರಿಸ್ಮಸ್ ಆಚರಣೆಯ ಅಧ್ಯಕ್ಷ ಹಾಗೂ ನೆಲ್ಯಾಡಿ ಸಂತ ಜಾರ್ಜ್ ವಿದ್ಯಾ ಸಂಸ್ಥೆಗಳ ಸಂಚಾಲಕ ಫಾ.ನೋಮಿಸ್ ಕುರಿಯಾಕೋಸ್ ವಹಿಸಿ ಮಾತನಾಡಿ, “ಕ್ರಿಸ್ಮಸ್‌ನ ಸುವಾರ್ತೆ ನಮ್ಮ ಅಂತರಂಗದಲ್ಲಿ ವಿಲೀನವಾಗಿ, ಆಂತರಿಕ ಶಕ್ತಿಯಾಗಿ ಹೊರಹೊಮ್ಮಿ ಸಮಾಜಮುಖಿ ಕಾರ್ಯಗಳಾಗಿ ರೂಪುಗೊಳ್ಳಬೇಕು. ನೈಜ ಕ್ರೈಸ್ತ ಜೀವನವನ್ನು ಬದುಕುವ ಮೂಲಕ ಸಮಾಜದಲ್ಲಿ ತೊಡಗಿಸಿಕೊಂಡಾಗ ಮಾತ್ರ ಅದು ನಿಜವಾದ ಕ್ರಿಸ್ಮಸ್ ಆಗುತ್ತದೆ. ಇಡೀ ಪ್ರಪಂಚವನ್ನು ಬೆಳಗಿಸಬೇಕು. ಕ್ರೈಸ್ತ ಧರ್ಮದಲ್ಲಿ ಜಾತಿಭೇದವಿಲ್ಲ” ಎಂದು ಅವರು ಹೇಳಿದರು. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ವೇದಿಕೆಯಲ್ಲಿ ಸಂತ ಅಲ್ಫೋನ್ಸ ಚರ್ಚಿನ ಧರ್ಮಗುರು ಫಾ.ಶಾಜಿ ಮ್ಯಾಥ್ಯು, ಸಮಿತಿ ಉಪಾಧ್ಯಕ್ಷ ಫಾ.ಸಾಮುವೆಲ್ ಜಾರ್ಜ್, ಕಾರ್ಯದರ್ಶಿ ಜೋನ್ ಪಿ.ಎಸ್., ಜೊತೆ ಕಾರ್ಯದರ್ಶಿ ಅಬ್ರಹಾಂ ಕೆ.ಪಿ., ಕೋಶಾಧಿಕಾರಿ ಸಜಿ ಕೆ. ತೋಮಸ್ ಉಪಸ್ಥಿತರಿದ್ದರು. ವಿವಿಧ ಚರ್ಚ್‌ಗಳ ಧರ್ಮಗುರುಗಳು, ರಾಜಕೀಯ ಮುಖಂಡರು ಹಾಗೂ ಸಮಿತಿಯ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮೆರವಣಿಗೆ:
ಇದಕ್ಕೂ ಮುನ್ನ ನೆಲ್ಯಾಡಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿಯಿಂದ ಪೇಟೆ ಮೂಲಕ ವಿವಿಧ ಚರ್ಚ್‌ಗಳ ಆಕರ್ಷಕ ಟ್ಯಾಬ್ಲೊಗಳು ಹಾಗೂ ನೃತ್ಯ ಪ್ರದರ್ಶನಗಳೊಂದಿಗೆ ಗಾಂಧಿ ಮೈದಾನದವರೆಗೆ ಭವ್ಯ ಮೆರವಣಿಗೆ ನಡೆಯಿತು.
ಸನ್ಮಾನ:
ಬಿಷಪ್ ಎಚ್.ಜಿ.ಯಾಕೋಬ್ ಮಾರ್ ಅಂತೋನಿಸ್, ಬಿಷಪ್ ಎಚ್.ಜಿ. ಗೀವರ್ಗೀಸ್ ಮಾರ್ ಮಕರಿಯೋಸ್ ಅವರನ್ನು ಸನ್ಮಾನಿಸಲಾಯಿತು. ಜೊತೆಗೆ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ವೇದಿಕೆಯಲ್ಲಿ ಗೌರವಿಸಲಾಯಿತು.
ಫಾ.ಶಾಜಿ ಮ್ಯಾಥ್ಯು ಸ್ವಾಗತಿಸಿದರು. ಜೋನ್ ಪಿ.ಎಸ್. ವರದಿ ವಾಚಿಸಿದರು. ಉದನೆ ಬಿಷಪ್ ಪೋಳಿಕಾರ್ಪೋಸ್ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ವಿನ್ಸೆಂಟ್ ವಿನೇಜಸ್, ಅನನ್ಯ ಹಾಗೂ ಸುಜಾ ಕಾರ್ಯಕ್ರಮ ನಿರೂಪಿಸಿದರು. ಫಾ.ಸಾಮುವೆಲ್ ಜಾರ್ಜ್ ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ವಿವಿಧ ಚರ್ಚ್ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.






