


ನೆಲ್ಯಾಡಿ: ದೇಶದಾದ್ಯಂತ ನಾಲ್ಕು ದಿನಗಳ ಕಾಲ ನಡೆಯುವ ಪಲ್ಸ್ ಪೋಲಿಯೋ ಲಸಿಕೆ ಅಭಿಯಾನ ಭಾನುವಾರ ಅಧಿಕೃತವಾಗಿ ಆರಂಭಗೊಂಡಿದ್ದು, ಐದು ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಕಾರ್ಯ ನಡೆಯಿತು.
ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ಕಾರ್ಯಕ್ರಮಕ್ಕೆ ನೆಲ್ಯಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಲಾಂ ಬಿಲಾಲ್ ಅವರು ಮಗುವಿಗೆ ಪೋಲಿಯೋ ಲಸಿಕೆ ಹನಿ ಹಾಕುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ರಾಷ್ಟ್ರಾದ್ಯಂತ ನಡೆಯುತ್ತಿರುವ ಈ ಮಹತ್ವದ ಆರೋಗ್ಯ ಕಾರ್ಯಕ್ರಮದಲ್ಲಿ ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೂ ಕಡ್ಡಾಯವಾಗಿ ಪೋಲಿಯೋ ಲಸಿಕೆ ಹಾಕಿಸುವ ಮೂಲಕ ಮುಂದಿನ ದಿನಗಳಲ್ಲಿ ಪೋಲಿಯೋ ರೋಗ ತಗುಲದಂತೆ ತಡೆಯಲು ಹಾಗೂ ಸಂಪೂರ್ಣ ನಿರ್ಮೂಲನೆ ಗುರಿಯನ್ನು ಸಾಧಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕೆಂದು ಮನವಿ ಮಾಡಿದರು.
ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶಿಶಿರ ಅವರು ಮಾತನಾಡಿ, ಮೊದಲ ದಿನ ಆರೋಗ್ಯ ಕೇಂದ್ರದಲ್ಲಿ ಪೋಲಿಯೋ ಹನಿಗಳನ್ನು ನೀಡಲಾಗುತ್ತಿದ್ದು, ಮುಂದಿನ ಎರಡು ದಿನಗಳ ಕಾಲ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಿಬ್ಬಂದಿ ಮನೆಮನೆಗೆ ಭೇಟಿ ನೀಡಿ ಉಳಿದ ಮಕ್ಕಳಿಗೂ ಪೋಲಿಯೋ ಲಸಿಕೆ ನೀಡಲಿದ್ದಾರೆ ಎಂದು ತಿಳಿಸಿದರು. ಯಾವುದೇ ಮಗು ಲಸಿಕೆಯಿಂದ ವಂಚಿತವಾಗದಂತೆ ಪಾಲಕರು ಸಹಕರಿಸುವಂತೆ ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ನೋಟರಿ ವಕೀಲ ಇಸ್ಮಾಯಿಲ್ ನೆಲ್ಯಾಡಿ, ನೆಲ್ಯಾಡಿ ಗ್ರಾಮ ಪಂಚಾಯಿತಿ ಸದಸ್ಯೆ ಉಷಾ ಜೋಯಿ, ಆಸ್ಪತ್ರೆಯ ನರ್ಸ್‌ಗಳು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದರು.






