ಯಶಸ್ಸು ಶಾಶ್ವತವಲ್ಲ, ಸೋಲು ಅಂತಿಮವಲ್ಲ, ಪ್ರಯತ್ನ ನಿರಂತರವಾಗಿರಬೇಕು – ಫಾ.ಡಾ.ವರ್ಗೀಸ್ ಕೈಪನಡ್ಕ



ನೆಲ್ಯಾಡಿ: ಯಶಸ್ಸು ಶಾಶ್ವತವಲ್ಲ. ಸೋಲು ಅಂತಿಮವಲ್ಲ. ಆದ್ದರಿಂದ ಗೆದ್ದರೂ ಸೋತರೂ ಪ್ರಯತ್ನವನ್ನು ಬಿಡಬಾರದು, ಕೌಶಲ್ಯ, ಪ್ರಯತ್ನ ಮತ್ತು ನಡತೆ ನಮ್ಮ ಭವಿಷ್ಯಕ್ಕೆ ಬುನಾದಿಯಂತೆ ಇರುವುದರಿಂದ ಇವುಗಳನ್ನು ವಿದ್ಯಾರ್ಥಿಗಳು ಕಾಪಾಡಿಕೊಂಡು ಬೆಳೆಯಬೇಕು. ಸಚಿನ್ ತೆಂಡುಲ್ಕರ್ ಹಾಗೂ ಪಿ.ವಿ.ಸಿಂಧು ಅವರು ಈ ಗುಣಗಳನ್ನು ಬೆಳೆಸಿಕೊಂಡ ಕಾರಣ ಶ್ರೇಷ್ಠ ಕ್ರೀಡಾಪಟುಗಳಾಗಿ ಹೊರಹೊಮ್ಮಲು ಸಾಧ್ಯವಾಯಿತು ಎಂದು ಜ್ಞಾನೋದಯ ಬೆಥನಿ ವಿದ್ಯೆ ಸಂಸ್ಥೆಯ ಸಂಚಾಲಕ ಫಾ.ಡಾ.ವರ್ಗೀಸ್ ಕೈಪನಡ್ಕ ಹೇಳಿದರು.
ಅವರು ಉದನೆ ಸೈಂಟ್ ಆಂಟನೀಸ್ ವಿದ್ಯಾಸಂಸ್ಥೆಯಲ್ಲಿ ನಡೆದ ಪ್ರತಿಭಾ ದಿನೋತ್ಸವ ಹಾಗೂ ಕ್ರಿಸ್ಮಸ್ ಆಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕ್ರಿಸ್ಮಸ್ ಎಂದರೆ ಶಾಂತಿ ಮತ್ತು ಪ್ರೀತಿ. ಪ್ರೀತಿಯನ್ನು ಪರಸ್ಪರ ಹಂಚಿಕೊಳ್ಳುವುದೇ ನಿಜವಾದ ಕ್ರಿಸ್ಮಸ್ ಆಚರಣೆ ಎನಿಸಿಕೊಳ್ಳುತ್ತದೆ ಎಂದು ಅವರು ಕ್ರಿಸ್ಮಸ್ ಸಂದೇಶ ನೀಡಿದರು. ಹೊಸ ವರ್ಷದ ಸ್ವಾಗತಕ್ಕೆ ನಾವೆಲ್ಲರೂ ಸಿದ್ಧರಾಗಿರಬೇಕು. ನಮಗೆ ವಿವಿಧ ರೀತಿಯಲ್ಲಿ ಸಹಕರಿಸಿದ ಪ್ರತಿಯೊಬ್ಬರನ್ನು ಸ್ಮರಿಸಬೇಕು ಎಂದು ಹೊಸ ವರ್ಷದ ಶುಭಾಶಯಗಳನ್ನು ಕೋರಿದರು.
ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಸಂಚಾಲಕ ಫಾ.ಹನಿ ಜೇಕಬ್ ಅವರು, ವಿವಿಧ ಆಟೋಟಗಳನ್ನು ಯಶಸ್ವಿಯಾಗಿ ನಡೆಸಿದ ಎಲ್ಲಾ ಸಿಬ್ಬಂದಿ ವರ್ಗದವರಿಗೆ ಧನ್ಯವಾದಗಳನ್ನು ತಿಳಿಸಿದರು. ಜೊತೆಗೆ ಕ್ರಿಸ್ಮಸ್ ಹಬ್ಬ ಹಾಗೂ ಹೊಸ ವರ್ಷದ ಶುಭಾಶಯಗಳನ್ನು ಕೋರಿದರು.
ವೇದಿಕೆಯಲ್ಲಿ ಸಂಸ್ಥೆಯ ಸಹ ಸಂಚಾಲಕ ಡೀಕನ್ ಜಾರ್ಜ್, ಕನ್ನಡ ಮಾಧ್ಯಮ ವಿಭಾಗದ ಮುಖ್ಯಸ್ಥ ಶ್ರೀಧರ ಗೌಡ, ಕನ್ನಡ ಮಾಧ್ಯಮ ವಿಭಾಗದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಜಯಪ್ರಕಾಶ್ ಎಂ., ಆಂಗ್ಲ ಮಾಧ್ಯಮ ವಿಭಾಗದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಕಿರಣ್ ಕುಮಾರ್ ಪುತ್ತಿಲ, ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹಾಗೂ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಜಿಮ್ಸನ್ ಕೆ.ಜೆ., ಆಡಳಿತಾಧಿಕಾರಿ ಜಾನ್ ಕೆ.ಕೆ. ಉಪಸ್ಥಿತರಿದ್ದರು.
ಸಂಸ್ಥೆಯ ಸಂಚಾಲಕರಾದ ಫಾ.ಹನಿ ಜೇಕಬ್ ಅವರು ದೀಕ್ಷೆ ಪಡೆದು 12ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಅವರ ಸೇವೆ ಹಾಗೂ ಸಾಧನೆಯನ್ನು ಗುರುತಿಸಿ ಗೌರವಿಸಲಾಯಿತು.
ಶಿರಾಡಿ ಗ್ರಾ.ಪಂ. ಅಧ್ಯಕ್ಷ ಕಾರ್ತಿಕೇಯನ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಬಾಲಕೃಷ್ಣ ಬಾಣಜಾಲು, ರಕ್ಷಕ ಶಿಕ್ಷಕ ಸಂಘದ ಸದಸ್ಯರು, ಪಾಲಕ-ಪೋಷಕರು, ಪೂರ್ವ ವಿದ್ಯಾರ್ಥಿಗಳು, ಊರಿನ ವಿದ್ಯಾಭಿಮಾನಿಗಳು, ಶಾಲಾ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿವಿಧ ಆಟೋಟಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳು, ಶಿಕ್ಷಕರು, ಪಾಲಕರು ಹಾಗೂ ಸಾರ್ವಜನಿಕರಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು. ಬಳಿಕ ವಿದ್ಯಾರ್ಥಿಗಳಿಂದ ಕ್ರಿಸ್ಮಸ್ ಸಂದೇಶ ಸಾರುವ ವೈವಿಧ್ಯಮಯ ನೃತ್ಯ ಹಾಗೂ ಹಾಡಿನ ಕಾರ್ಯಕ್ರಮಗಳು ನಡೆಯಿತು.
ಮುಖ್ಯಶಿಕ್ಷಕ ಸಿಬಿಚ್ಚನ್ ಟಿ.ಸಿ ಸ್ವಾಗತಿಸಿ ವರದಿ ವಾಚಿಸಿದರು. ಶಿಕ್ಷಕ ಬಾಲಕೃಷ್ಣ ಗೌಡ ವಂದಿಸಿದರು. ಶಿಕ್ಷಕಿ ದಿವ್ಯಾ ಕಾರ್ಯಕ್ರಮ ನಿರೂಪಿಸಿದರು.






