ನೆಲ್ಯಾಡಿ: ಪಡುಬೆಟ್ಟು ಸರಕಾರಿ ಪ್ರೌಢಶಾಲಾ ವಾರ್ಷಿಕ ಕ್ರೀಡೋತ್ಸವ

ಶೇರ್ ಮಾಡಿ

ನೆಲ್ಯಾಡಿ: ಪಡುಬೆಟ್ಟು ಸರಕಾರಿ ಪ್ರೌಢಶಾಲೆಯ ವಾರ್ಷಿಕ ಕ್ರೀಡೋತ್ಸವ ಶನಿವಾರ ಶಾಲಾ ಮೈದಾನದಲ್ಲಿ ನಡೆಯಿತು.

ಕಾರ್ಯಕ್ರಮದ ಅಂಗವಾಗಿ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಜನಾರ್ದನ ಟಿ ಅವರು ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿ, ಜೀವನದಲ್ಲಿ ಕ್ರೀಡೆಗಳು ಕಲಿಸುವ ಪಾಠಗಳು ಅನೇಕವೆಂದು ಹೇಳಿದರು. ಓಡುವ ಪ್ರತಿ ಓಣಿಯೂ ನಮ್ಮ ನಿಜ ಜೀವನದ ಪರಿಧಿಯಂತೆ ಇದ್ದು, ಜೀವನವು ಆಳಿತಪ್ಪದಂತೆ ಸಾಗುವಂತೆ ಎಚ್ಚರಿಸುವ ಪಾಠವನ್ನು ಕ್ರೀಡೆಗಳು ನಮಗೆ ಹೇಳಿಕೊಡುತ್ತವೆ ಎಂದು ಅಭಿಪ್ರಾಯಪಟ್ಟರು. ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲೇ ಉತ್ತಮ ನಡವಳಿಕೆಯನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ನೆಲ್ಯಾಡಿ ಗ್ರಾಮ ಪಂಚಾಯಿತಿನ ಅಧ್ಯಕ್ಷ ಸಲಾಂ ಬಿಲಾಲ್ ಅವರು ಕ್ರೀಡೋತ್ಸವದ ಪಥ ಸಂಚಲನವನ್ನು ವೀಕ್ಷಿಸಿ ಗೌರವವಂದನೆಯನ್ನು ಸ್ವೀಕರಿಸಿ ಮಾತನಾಡಿ, ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಹೊರತರುವಲ್ಲಿ ಕ್ರೀಡಾಕೂಟಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದರು. ಕಲಿಕೆ ಮತ್ತು ಕ್ರೀಡೆಗಳು ಮಕ್ಕಳ ಪರಿಪೂರ್ಣ ಶಿಕ್ಷಣಕ್ಕೆ ನಾಂದಿಯಾಗಿದ್ದು, ಈ ನಿಟ್ಟಿನಲ್ಲಿ ಶಾಲೆಯ ಕ್ರೀಡಾಕೂಟ ಶ್ಲಾಘನೀಯವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಅಣ್ಣಿ ಎಳ್ತಿಮಾರ್ ಅವರು, ಕ್ರೀಡೆಗಳು ಮನೋರಂಜನೆಯ ಜೊತೆಗೆ ಆರೋಗ್ಯದ ದೃಷ್ಟಿಯಿಂದಲೂ ಬಹಳ ಅಗತ್ಯವಾಗಿವೆ. ಕ್ರೀಡಾ ಸ್ಪೂರ್ತಿಯನ್ನು ವಿದ್ಯಾರ್ಥಿಗಳು ತಮ್ಮ ನಿಜ ಜೀವನದಲ್ಲಿಯೂ ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಶಾಲಾ ಮುಖ್ಯಶಿಕ್ಷಕಿ ಕಮಲ ಕೆ. ಸ್ವಾಗತಿಸಿದರು. ಸಹಶಿಕ್ಷಕ ಜಯಪ್ಪ ಎಚ್. ವಂದಿಸಿದರು. ಶಿಕ್ಷಕಿ ಪ್ರಭಾ ಎಂ.ಜಿ. ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಗೆ ವಿವಿಧ ಕ್ರೀಡಾಕೂಟಗಳನ್ನು ನಡೆಸಲಾಯಿತು.

  •  

Leave a Reply

error: Content is protected !!