

ಉಜಿರೆ: ಉಜಿರೆಯ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷರೂ, ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸ್ಥಾಪಕ ಪ್ರಾಂಶುಪಾಲರೂ ಆಗಿದ್ದ ವಿದ್ಯಾಭಿಮಾನಿ, ಶಿಕ್ಷಣ ತಪಸ್ವಿ ಪ್ರೊ. ಎಸ್. ಪ್ರಭಾಕರ್(89) ಅವರು ಡಿ.24ರಂದು ವಿಧಿವಶರಾಗಿದ್ದಾರೆ.
ಉಜಿರೆಯ ನಿವಾಸಿಯಾಗಿದ್ದ ಪ್ರೊ.ಎಸ್.ಪ್ರಭಾಕರ್ ಅವರನ್ನು “ಸಾವಿರಾರು ವಿದ್ಯಾರ್ಥಿಗಳ ಪ್ರಾಂಶುಪಾಲ” ಎಂದೇ ಕರೆಯಲಾಗುತ್ತಿತ್ತು. 1966ರಲ್ಲಿ ಉಜಿರೆಯಲ್ಲಿ ಪದವಿ ಶಿಕ್ಷಣ ಆರಂಭವಾದಾಗ, ನೂತನವಾಗಿ ಸ್ಥಾಪಿತವಾದ ಎಸ್.ಡಿ.ಎಂ ಕಾಲೇಜಿನ ಪ್ರಥಮ ಪ್ರಾಂಶುಪಾಲರಾಗಿ ನೇಮಕಗೊಂಡ ಅವರು, ನಿರಂತರ 27 ವರ್ಷಗಳ ಕಾಲ ಸಂಸ್ಥೆಯನ್ನು ಮುನ್ನಡೆಸಿ ಗುಣಾತ್ಮಕ ಶಿಕ್ಷಣಕ್ಕೆ ಸ್ಪಷ್ಟ ದಿಕ್ಕು ನೀಡಿದರು. ಗ್ರಾಮೀಣ ಹಿನ್ನೆಲೆಯ ಕಾಲೇಜನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಪ್ರಾಂಶುಪಾಲ ಹುದ್ದೆಯಿಂದ ನಿವೃತ್ತಿಯಾದ ಬಳಿಕವೂ ವಿಶ್ರಾಂತಿಯನ್ನು ಆಯ್ಕೆ ಮಾಡದೇ, ಎಸ್.ಡಿ.ಎಂ ಎಜ್ಯುಕೇಶನ್ ಸೊಸೈಟಿಯ ಕಾರ್ಯದರ್ಶಿಯಾಗಿ ಹಾಗೂ ನಂತರ ಉಪಾಧ್ಯಕ್ಷರಾಗಿ ಸಂಸ್ಥೆಗಳ ಏಳಿಗೆಗೆ ಜೀವನಪೂರ್ತಿ ಶ್ರಮಿಸಿದರು. ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ವಿದ್ಯಾದಾನಕ್ಕೆ ಶತಮಾನಗಳ ಪರಂಪರೆ ಇದ್ದರೂ, ಅದನ್ನು ಆಧುನಿಕ ಶಿಕ್ಷಣದೊಂದಿಗೆ ಜೋಡಿಸಿ ಸಂಸ್ಥಾತ್ಮಕ ರೂಪ ನೀಡಿದವರಲ್ಲಿ ಪ್ರೊ. ಪ್ರಭಾಕರ್‌ರವರ ಪಾತ್ರ ಅನನ್ಯ. ಮಂಜಯ್ಯ ಹೆಗ್ಗಡೆಯವರ ಕಾಲದ ಸಿದ್ಧವನ ಗುರುಕುಲ ಪರಂಪರೆಯಿಂದ ಆರಂಭಗೊಂಡ ಶಿಕ್ಷಣ ಯಾತ್ರೆಯನ್ನು, ರತ್ನವರ್ಮ ಹೆಗ್ಗಡೆಯವರು ಉಜಿರೆಯಲ್ಲಿ ಪದವಿ ಶಿಕ್ಷಣವಾಗಿ ರೂಪಿಸಿದಾಗ, ಆ ಕನಸಿಗೆ ಜೀವ ತುಂಬಿದವರು ಪ್ರೊ. ಪ್ರಭಾಕರ್. ವೀರೇಂದ್ರ ಹೆಗ್ಗಡೆಯವರೊಂದಿಗೆ ಹತ್ತಿರದ ಮಾರ್ಗದರ್ಶಕ, ನಿಕಟವರ್ತಿ ಮತ್ತು ನಂಬಿಕೆಯ ಸಹಯೋಗಿಯಾಗಿ ಸುಮಾರು ಐದು ದಶಕಗಳ ಕಾಲ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳನ್ನು ಪೋಷಿಸಿದರು.
ಮೈಸೂರು ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ಪಡೆದ ಪ್ರತಿಭಾವಂತರಾದ ಅವರು, ನಗರ ಪ್ರದೇಶದಲ್ಲೇ ಉಳಿದು ಉನ್ನತ ಹುದ್ದೆಗಳನ್ನು ಅಲಂಕರಿಸಬಹುದಾದ ಅವಕಾಶಗಳಿದ್ದರೂ, ಅವೆಲ್ಲವನ್ನೂ ತ್ಯಜಿಸಿ ಗ್ರಾಮೀಣ ಶಿಕ್ಷಣ ಸೇವೆಯನ್ನು ತಮ್ಮ ಜೀವನ ಧ್ಯೇಯವನ್ನಾಗಿಸಿಕೊಂಡರು. ಬೆಂಗಳೂರಿನ ಸರಕಾರಿ ಮಹಾರಾಣಿ ಕಾಲೇಜಿನಲ್ಲಿ ವೃತ್ತಿ ಜೀವನ ಆರಂಭಿಸಿದ ಅವರು, ನಗರ ನೌಕರಿಯನ್ನು ಬಿಟ್ಟು ಉಜಿರೆಗೆ ಬಂದು ಶಿಕ್ಷಣ ಕ್ರಾಂತಿಯ ಭಾಗವಾದರು.
ಶಿಕ್ಷಕರಾಗಿ, ಆಡಳಿತಗಾರರಾಗಿ ಮಾತ್ರವಲ್ಲದೆ, ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮತ್ತು ಸ್ವಾವಲಂಬನೆ ಬೆಳೆಸುವ ಶಿಕ್ಷಣ ಚಿಂತಕರಾಗಿಯೂ ಪ್ರೊ. ಪ್ರಭಾಕರ್ ಗುರುತಿಸಿಕೊಂಡಿದ್ದರು. ಪದವಿಯ ನಂತರವೂ ಉದ್ಯೋಗಕ್ಕಾಗಿ ಕೈಚಾಚುವ ಮನೋಭಾವದ ವಿರುದ್ಧವಾಗಿ, ವೀರೇಂದ್ರ ಹೆಗ್ಗಡೆಯವರೊಂದಿಗೆ ಸೇರಿ ರತ್ನಮಾನಸ ಮತ್ತು ರುಡ್‌ಸೆಟ್ ಸಂಸ್ಥೆಗಳ ಸ್ಥಾಪನೆಗೆ ಬಲವಾದ ಚಿಂತನೆ ನೀಡಿದರು. ಈ ಸಂಸ್ಥೆಗಳು ಗ್ರಾಮೀಣ ಯುವಜನತೆಗೆ ಸ್ವಉದ್ಯೋಗದ ದಾರಿ ತೋರಿದವು.
ಕನ್ನಡ ಸಾಹಿತ್ಯ ಮತ್ತು ಪತ್ರಿಕೋದ್ಯಮ ಕ್ಷೇತ್ರದಲ್ಲಿಯೂ ಅವರ ಕೊಡುಗೆ ಮಹತ್ವದದು. ಧರ್ಮಸ್ಥಳದ ಮುಖವಾಣಿ ‘ಮಂಜುವಾಣಿ’ ಕನ್ನಡ ಮಾಸಪತ್ರಿಕೆಯ ಸಂಪಾದಕರಾಗಿ ದೀರ್ಘಕಾಲ ಸೇವೆ ಸಲ್ಲಿಸಿದ ಅವರು, ಮಂಜುಶ್ರೀ ಪ್ರೆಸ್ ಹಾಗೂ ಮಂಜುಶ್ರೀ ಪ್ರಕಾಶನಾಲಯದ ಬೆಳವಣಿಗೆಗೂ ಪ್ರಮುಖ ಕಾರಣರಾದರು. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದಲ್ಲಿ ಸಂಪಾದಕರಾಗಿ ಕಾರ್ಯನಿರ್ವಹಿಸಿ ಹಲವಾರು ಮೌಲಿಕ ಪ್ರಕಟಣೆಗಳನ್ನು ಹೊರತಂದಿದ್ದಾರೆ. ಇವರಿಗೆ ಅಧ್ಯಾಪಕ ಭೂಷಣ ಪ್ರಶಸ್ತಿ ಸೇರಿದಂತೆ ಹಲವಾರು ಗೌರವಗಳು ಲಭಿಸಿದ್ದವು.
ವೈಯಕ್ತಿಕ ಬದುಕಿನಲ್ಲಿ ಸರಳತೆ, ಸ್ವಾಭಿಮಾನ ಮತ್ತು ನಿರೀಕ್ಷೆ ರಹಿತ ಜೀವನ ನಡೆಸಿದ ಪ್ರೊ. ಪ್ರಭಾಕರ್, ಮೂವತ್ತು ವರ್ಷಗಳಿಂದ ಯೋಗಾಭ್ಯಾಸವನ್ನು ತಮ್ಮ ದಿನಚರಿಯ ಭಾಗವನ್ನಾಗಿಸಿಕೊಂಡಿದ್ದರು. ಶಸ್ತ್ರಚಿಕಿತ್ಸೆಯ ನಂತರವೂ ಯೋಗಬಲದಿಂದ ಆರೋಗ್ಯ ಕಾಪಾಡಿಕೊಂಡು ಜೀವನದ ಅಂತ್ಯವರೆಗೂ ಲವಲವಿಕೆಯಿಂದಿದ್ದರು. ಪ್ರೊ. ಎಸ್. ಪ್ರಭಾಕರ್ ಅವರು ಪುತ್ರಿ ಶರ್ಮಿಳಾ ಸೇರಿದಂತೆ ಅಪಾರ ಬಂಧು ಬಳಗ, ಶಿಷ್ಯ ವೃಂದ ಮತ್ತು ಅಭಿಮಾನಿಗಳನ್ನು ಅಗಲಿದ್ದಾರೆ.






