ಬಾಡಿಗೆ ನೆಪದಲ್ಲಿ ಕರೆದೊಯ್ದು ಮಾರಣಾಂತಿಕ ಹಲ್ಲೆ: ಅಬ್ದುಲ್ ಜಬ್ಬಾರ್ ಹತ್ಯೆ ಪ್ರಕರಣ – ಇಬ್ಬರ ಬಂಧನ

ಶೇರ್ ಮಾಡಿ

ಸುಳ್ಯ: ಬಾಡಿಗೆ ವಿಚಾರದ ನೆಪದಲ್ಲಿ ವ್ಯಕ್ತಿಯನ್ನು ಕರೆದುಕೊಂಡು ಹೋಗಿ ಕಿರುಕುಳ ನೀಡಿ, ನಂತರ ಮಾರಣಾಂತಿಕ ಹಲ್ಲೆ ನಡೆಸಿ ಜೀವಬೆದರಿಕೆ ಒಡ್ಡಿದ ಪ್ರಕರಣದಲ್ಲಿ ಮೃತಪಟ್ಟ ಅಬ್ದುಲ್ ಜಬ್ಬಾರ್ ಸಾವನ್ನು ಕೊಲೆ ಎಂದು ಪರಿಗಣಿಸಿ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ತನಿಖೆ ನಡೆಸಲಾಗುತ್ತಿದೆ.

ಸುಳ್ಯ ಕಸ್ಬಾ ಗ್ರಾಮದ ನಿವಾಸಿ ಸುಮಯ್ಯಾ (35) ಅವರು ನೀಡಿದ ದೂರಿನಂತೆ, ಅವರ ಪತಿ ಅಬ್ದುಲ್ ಜಬ್ಬಾರ್ ಅವರನ್ನು 16.10.2025ರಂದು ಮಧ್ಯಾಹ್ನ ವೇಳೆ ಆರೋಪಿಗಳಾದ ಮೊಹಮ್ಮದ್ ರಫೀಕ್ ಹಾಗೂ ಇತರರು ಬಾಡಿಗೆಯ ನೆಪದಲ್ಲಿ ದುಗ್ಗಲಡ್ಕ ಎಂಬಲ್ಲಿಗೆ ಕರೆದುಕೊಂಡು ಹೋಗಿ ಕಿರುಕುಳ ನೀಡಿದ್ದು, ಅಲ್ಲಿಂದ ಸುಳ್ಯ ಕಲ್ಲುಗುಂಡಿಗೆ ಕರೆತಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿ ಜೀವಬೆದರಿಕೆ ಒಡ್ಡಿ ಕಳುಹಿಸಿದ್ದರು ಎನ್ನಲಾಗಿದೆ.

ಹಲ್ಲೆಯ ನಂತರ 17.10.2025ರಂದು ಅಬ್ದುಲ್ ಜಬ್ಬಾರ್ ಮನೆಯಲ್ಲಿದ್ದಾಗ ತೀವ್ರ ಅನಾರೋಗ್ಯಕ್ಕೀಡಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ 18.10.2025ರಂದು ನೀಡಿದ ದೂರಿನ ಮೇರೆಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ. 125/2025, ಕಲಂ 105 ಜೊತೆಗೆ 3(5) BNS ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ನಂತರ ವೈದ್ಯಕೀಯ ವರದಿಯಲ್ಲಿ ಹಲ್ಲೆಯ ಪರಿಣಾಮದಿಂದಲೇ ಅಬ್ದುಲ್ ಜಬ್ಬಾರ್ ಮೃತಪಟ್ಟಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಪ್ರಕರಣವನ್ನು ಕಲಂ 103 ಜೊತೆಗೆ 3(5) BNS ಅಡಿಯಲ್ಲಿ ಕೊಲೆ ಪ್ರಕರಣವಾಗಿ ಮಾರ್ಪಡಿಸಲಾಗಿದೆ.

ಪ್ರಕರಣದ ತನಿಖೆಯ ಭಾಗವಾಗಿ ಸುಳ್ಯ ಕಸ್ಬಾ ನಿವಾಸಿ ಮೊಹಮ್ಮದ್ ರಫೀಕ್ (41) ಎಂಬಾತನನ್ನು ಪೊಲೀಸರು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, ಮುಂದಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಕೃತ್ಯಕ್ಕೆ ಬಳಸಿದ ಕಾರನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ. ಪ್ರಕರಣದ ಇನ್ನೋರ್ವ ಆರೋಪಿಯಾದ ಸುಳ್ಯ ಸಂಪಾಜೆ ನಿವಾಸಿ ಮನೋಹರ್ ಕೆ.ಎಸ್.ಮನು (42) ಎಂಬಾತನನ್ನೂ ದಸ್ತಗಿರಿ ಮಾಡಲಾಗಿದ್ದು, ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.

  •  

Leave a Reply

error: Content is protected !!