

ಪುತ್ತೂರು: ನಿವೃತ್ತ ಪ್ರಾಂಶುಪಾಲರ ಮನೆಗೆ ಮಧ್ಯರಾತ್ರಿ ನುಗ್ಗಿ ದರೋಡೆಗೆ ಯತ್ನಿಸಿ, ದಂಪತಿಯನ್ನು ಬೆದರಿಸಿದ ಪ್ರಕರಣದಲ್ಲಿ ಪುತ್ತೂರು ನಗರ ಪೊಲೀಸರು ಆರೋಪಿಗಳಾದ ಪತಿ–ಪತ್ನಿಯನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದಿದ್ದಾರೆ.
ಪುತ್ತೂರು ಕಸಬಾ ನಿವಾಸಿ ನಿವೃತ್ತ ಪ್ರಾಂಶುಪಾಲ ಎ.ವಿ.ನಾರಾಯಣ(84) ಅವರು ನೀಡಿದ ದೂರಿನಂತೆ ಡಿ.17ರ ಮಧ್ಯರಾತ್ರಿ ಯಾರೋ ಇಬ್ಬರು ಅಪರಿಚಿತರು ಹೆಲ್ಮೆಟ್ ಧರಿಸಿಕೊಂಡು ಮುಖಚಹರೆಯನ್ನು ಮರೆಮಾಚಿ, ಮನೆ ಹಿಂಬಾಗಿಲಿನಿಂದ ಪ್ರವೇಶಿಸಿ ಬೆಲೆಬಾಳುವ ಸೊತ್ತುಗಳನ್ನು ಕಳ್ಳತನ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಆರೋಪಿಗಳು ಎ.ವಿ.ನಾರಾಯಣ ಹಾಗೂ ಅವರ ಪತ್ನಿಯನ್ನು ಬೆದರಿಸಿದ್ದು, ನಡೆದ ತಳ್ಳಾಟದಲ್ಲಿ ಎ.ವಿ.ನಾರಾಯಣರ ಪತ್ನಿಗೆ ಗಾಯಗಳಾಗಿವೆ. ಜೋರಾಗಿ ಕಿರುಚಿದಾಗ ಹೆದರಿದ ಆರೋಪಿಗಳು ಮನೆಯ ಹಿಂಬಾಗಿಲಿನ ಮೂಲಕ ಓಡಿ ಪರಾರಿಯಾಗಿದ್ದಾರೆ. ಅದೃಷ್ಟವಶಾತ್ ಮನೆಯಲ್ಲಿದ್ದ ಯಾವುದೇ ಸೊತ್ತುಗಳು ಕಳ್ಳತನವಾಗಿಲ್ಲ.
ಈ ಸಂಬಂಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 127/2025, ಕಲಂ 307 ಜೊತೆಗೆ 3(5) ಬಿ.ಎನ್.ಎಸ್. 2023ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಯನ್ನು ಕೈಗೊಂಡ ಪುತ್ತೂರು ನಗರ ಪೊಲೀಸರು ಆರೋಪಿಗಳಾದ ಪುತ್ತೂರು ಮುಡೂರು ನಿವಾಸಿ ಪ್ರಸ್ತುತ ಪಂಜ ಬಾಡಿಗೆ ಮನೆ ವಾಸವಾಗಿರುವ ಕಾರ್ತಿಕ್ ರಾವ್ (31) ಹಾಗೂ ಆತನ ಪತ್ನಿ ಕೆ.ಎಸ್. ಸ್ವಾತಿ ರಾವ್ (25) ಎಂಬವರನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ ಮೋಟಾರು ಸೈಕಲ್ ಅನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿ ಕಾರ್ತಿಕ್ ರಾವ್ ಸಹಾಯಕ ಅರ್ಚಕರಾಗಿ ಕೆಲಸ ಮಾಡುತ್ತಿರುವುದು ತನಿಖೆಯಿಂದ ತಿಳಿದುಬಂದಿದೆ.






