

ಕೊಕ್ಕಡ: ಶೀರೂರು ಮಠದ ಶೀರೂರು ಶ್ರೀಶ್ರೀ ವೇದ ವರ್ಧನ ಸ್ವಾಮೀಜಿಗಳು ಪರ್ಯಾಯ ಸಂಚಾರದ ಅಂಗವಾಗಿ ಬೆಳ್ತಂಗಡಿ ತಾಲೂಕಿನ ವಿವಿಧ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದು, ಈ ಪ್ರಯುಕ್ತ ಜ.2ರಂದು ಅರಸಿನಮಕ್ಕಿಗೆ ಆಗಮಿಸಲಿದ್ದಾರೆ.
ಸ್ವಾಮೀಜಿಗಳು ನಾಳೆ ಬೆಳಿಗ್ಗೆ ಅರಸಿನಮಕ್ಕಿ ಶ್ರೀ ಬೂಡುಮುಗೇರು ದೇವಸ್ಥಾನಕ್ಕೆ ಆಗಮಿಸಲಿದ್ದು, ಬೆಳಿಗ್ಗೆ 8.30 ಗಂಟೆಗೆ ಪೂರ್ಣ ಕುಂಭಸ್ವಾಗತದೊಂದಿಗೆ ಭವ್ಯ ಸ್ವಾಗತ ಕಾರ್ಯಕ್ರಮ ನಡೆಯಲಿದೆ. ಬಳಿಕ ಪಟ್ಟದ ದೇವರ ವಿಶೇಷ ಪೂಜೆ, ಶ್ರೀಗಳ ಅಶೀರ್ವಚನ ಹಾಗೂ ನಾಗರಿಕ ಸನ್ಮಾನ ಕಾರ್ಯಕ್ರಮಗಳು ನೆರವೇರಲಿವೆ.
ಈ ಸಂದರ್ಭದಲ್ಲಿ ಶಿಶಿಲ, ಶಿಬಾಜೆ, ಹತ್ಯಡ್ಕ ಹಾಗೂ ರೆಖ್ಯ ಗ್ರಾಮಗಳ ಪರವಾಗಿ ಶೀರೂರು ಶ್ರೀಶ್ರೀ ವೇದ ವರ್ಧನ ಸ್ವಾಮೀಜಿಗಳಿಗೆ ಗೌರವ ಸನ್ಮಾನ ಸಲ್ಲಿಸಲಿದ್ದು, ವಿವಿಧ ಸಂಘ–ಸಂಸ್ಥೆಗಳ ವತಿಯಿಂದ ಅಭಿನಂದನೆ ಮತ್ತು ಗೌರವ ಸಮರ್ಪಣೆ ನಡೆಯಲಿದೆ.
ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಮಿತಿಯ ಪದಾಧಿಕಾರಿಗಳು ಸಕಲ ಸಿದ್ಧತೆಗಳನ್ನು ಕೈಗೊಂಡಿದ್ದು, ಗ್ರಾಮಸ್ಥರು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶೀರೂರು ಶ್ರೀಗಳ ಆಶೀರ್ವಾದ ಪಡೆಯುವಂತೆ ಸಂಘಟನಾ ಸಮಿತಿಯ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.






