ಕಡಬ ಸರಸ್ವತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಪ್ತಶಕ್ತಿ ಸಂಗಮ ಕಾರ್ಯಕ್ರಮ

ಶೇರ್ ಮಾಡಿ

ಕಡಬ: ಸರಸ್ವತಿ ಆಂಗ್ಲ ಮಾಧ್ಯಮ ಶಾಲೆ, ಹನುಮಾನ್ ನಗರ ಇದರ ಆಶ್ರಯದಲ್ಲಿ ಕಡಬ ತಾಲೂಕು ಮಟ್ಟದ “ಸಪ್ತಶಕ್ತಿ ಸಂಗಮ” ಕಾರ್ಯಕ್ರಮವು ಶನಿವಾರ ಶಾಲಾ ಆವರಣದಲ್ಲಿ ನಡೆಯಿತು.

ಕಾರ್ಯಕ್ರಮಕ್ಕೆ ಆಗಮಿಸಿದ ಮಾತೆಯರನ್ನು ಆರತಿ ಬೆಳಗಿ, ಅರಿಶಿನ–ಕುಂಕುಮ, ಬೆಲ್ಲ ಹಾಗೂ ನೀರು ನೀಡಿ ಸತ್ಕರಿಸುವ ಮೂಲಕ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ನಂತರ ಅತಿಥಿಗಳು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತದನಂತರ ವಿದ್ಯಾರ್ಥಿಗಳಿಂದ ಭಕ್ತಿಪೂರ್ಣ ಸರಸ್ವತಿ ವಂದನೆ ನಡೆಯಿತು.

ಕಾರ್ಯಕ್ರಮದ ವಿಶೇಷ ಅಂಗವಾಗಿ ಮಾತಾಜಿ ಪವಿತ್ರ ಎನ್. ರೈ ಅವರ ಮಾರ್ಗದರ್ಶನದಲ್ಲಿ ನೆರೆದಿದ್ದ ಮಾತೆಯರಿಗೆ ದೇಶಭಕ್ತಿ ಗೀತೆಯನ್ನು ಕಲಿಸಿಕೊಡಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ, ಕಲ್ಲಡ್ಕ ಇಲ್ಲಿನ ಸಹಶಿಕ್ಷಕಿ ರಾಜೇಶ್ವರಿ ಸುವರ್ಣ ಮಾತಾಜಿ, “ಕುಟುಂಬದ ಅರಿವು ಮತ್ತು ಪರಿಸರದ ಬಗ್ಗೆ ಭಾರತೀಯ ದೃಷ್ಟಿಕೋನ” ಎಂಬ ವಿಷಯದ ಕುರಿತು ಅರ್ಥಪೂರ್ಣ ಉಪನ್ಯಾಸ ನೀಡಿದರು.

ಆಡಳಿತ ಮಂಡಳಿ ಸದಸ್ಯರಾದ ದಿವ್ಯ ವಾಸುದೇವ ಗೌಡ ಅವರು ಮಹಿಳೆಯರಲ್ಲಿ ಅಡಗಿರುವ ಸಪ್ತಶಕ್ತಿಯ ಅರಿವು ಹಾಗೂ ಅದರ ಮಹತ್ವದ ಕುರಿತು ಮಾಹಿತಿ ನೀಡಿದರು. ಶೋಭಾ ಹೆಗ್ಡೆ ಮಾತಾಜಿ ಅವರಿಂದ ಮಾತೆಯರಿಗಾಗಿ ರಸಪ್ರಶ್ನೆ ಕಾರ್ಯಕ್ರಮ ನಡೆಯಿತು. ಈ ರಸಪ್ರಶ್ನೆಯಲ್ಲಿ ವಿಜೇತರಾದವರಿಗೆ ರಾಜೇಶ್ವರಿ ಸುವರ್ಣ ಮಾತಾಜಿ ಅವರು ಬಹುಮಾನ ವಿತರಿಸಿದರು.

ಕಾರ್ಯಕ್ರಮದ ಆಕರ್ಷಣೆಯಾಗಿ ವಿದ್ಯಾರ್ಥಿಗಳು ವೀರ ಮಹಿಳೆಯರ ವೇಷಭೂಷಣಗಳನ್ನು ಧರಿಸಿ ಸ್ಪೂರ್ತಿದಾಯಕ ಸಂದೇಶಗಳನ್ನು ನೀಡಿದರು. ಕೊಡಿಂಬಾಳ ಪಲ್ಲತಡ್ಕದ ನಾಟಿ ವೈದ್ಯೆಜಾನಕಿ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವರಮಹಾಲಕ್ಷ್ಮಿ ಪೂಜಾ ಸಮಿತಿ, ಸರಸ್ವತಿ ವಿದ್ಯಾಲಯ ಕಡಬ ಇದರ ಕಾರ್ಯದರ್ಶಿ ಜಯಶ್ರೀ ಎ. ಅವರು ವಹಿಸಿದ್ದರು. ವೇದಿಕೆಯಲ್ಲಿ ಶಾಲಿನಿ ರೈ ಹಾಗೂ ಮಾತಾಜಿ ಪವಿತ್ರ ರೈ ಉಪಸ್ಥಿತರಿದ್ದರು.

ಹರ್ಷಿತ ಮಾತಾಜಿ ಅವರು ಮಾತೆಯರಿಗೆ ಸಪ್ತಶಕ್ತಿ ಸಂಗಮದ ಸಂಕಲ್ಪವನ್ನು ಬೋಧಿಸಿದರು. ಅನಿತಾ ಮಾತಾಜಿ ಸ್ವಾಗತಿಸಿದರು, ಸುಮಂಗಲ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು, ಮಾತಾಜಿ ಪವಿತ್ರ ರೈ ವಂದಿಸಿದರು, ಒಟ್ಟಾರೆ 120ಕ್ಕೂ ಹೆಚ್ಚು ಮಾತೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಪ್ತಶಕ್ತಿ ಸಂಗಮ ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಿದರು.

  •  

Leave a Reply

error: Content is protected !!