


ನೆಲ್ಯಾಡಿ: ಅಖಿಲ ಭಾರತ ಹುಲಿ ಗಣತಿ ಪ್ರಕ್ರಿಯೆ ಕರ್ನಾಟಕದಲ್ಲಿ ಅಧಿಕೃತವಾಗಿ ಆರಂಭಗೊಂಡಿದೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಹಾಗೂ ಭಾರತೀಯ ವನ್ಯಜೀವಿ ಸಂಸ್ಥೆಗಳ ಮಾರ್ಗದರ್ಶನದಲ್ಲಿ ಕರ್ನಾಟಕ ಅರಣ್ಯ ಇಲಾಖೆ ಸಮೀಕ್ಷೆಯನ್ನು ಹಂತ ಹಂತವಾಗಿ ನಡೆಸುತ್ತಿದೆ. ಈ ಪ್ರಕ್ರಿಯೆಯ ಮೊದಲ ಹಂತ ಜ.5ರಿಂದ ರಾಜ್ಯಾದ್ಯಂತ ಜಾರಿಗೆ ಬಂದಿದೆ.
2022ರ ಗಣತಿಯಂತೆ ರಾಜ್ಯದಲ್ಲಿ 563 ಹುಲಿಗಳಿದ್ದು, ಮಧ್ಯಪ್ರದೇಶದ ಬಳಿಕ ಎರಡನೇ ಸ್ಥಾನದಲ್ಲಿದೆ. 2026ರ ಪ್ರಕ್ರಿಯೆಯ ಅಂತಿಮ ವರದಿ 2027ರಲ್ಲಿ ಪ್ರಕಟವಾಗಲಿದೆ.
ಹಂತ 1ರಲ್ಲಿ ಎರಡು ಪ್ರಮುಖ ಚಟುವಟಿಕೆಗಳನ್ನು ಕೈಗೊಳ್ಳಲಾಗಿದೆ. ಮೊದಲನೆಯದು ಮಾಂಸಾಹಾರಿ ಪ್ರಾಣಿಗಳ ಕುರುಹುಗಳ ಸಮೀಕ್ಷೆ. ಈ ಸಮೀಕ್ಷೆಯನ್ನು ಅರಣ್ಯ ರಸ್ತೆ ಮತ್ತು ಕಾಲು ಹಾದಿಗಳಲ್ಲಿ ದಿನಕ್ಕೆ ಕನಿಷ್ಠ ಕಿ.ಮೀ ನಡೆಯುವ ಮೂಲಕ ಮೂರು ದಿನಗಳ ಕಾಲ ನಡೆಸ ಲಾಗುತ್ತದೆ. ಹುಲಿ, ಚಿರತೆ, ಕಾಡುನಾಯಿ, ನರಿ, ತೋಳ, ಆನೆ, ಕಾಟಿ ಮತ್ತಿತರ ಪ್ರಾಣಿಗಳ ಪರೋಕ್ಷ ಕುರುಹುಗಳನ್ನು ದಾಖಲಿಸಲಾಗುತ್ತಿದೆ. ಡಿಎನ್‌ಎ ವಿಶ್ಲೇಷಣೆಗಾಗಿ ತಾಜಾ ಲದ್ದಿಗಳನ್ನು ಸಂಗ್ರಹಿಸಲಾಗುತ್ತಿದ್ದು, ಈ ಉದ್ದೇಶಕ್ಕಾಗಿ ರಾಜ್ಯಕ್ಕೆ 2700 ಜಿಪ್ ಲಾಕ್ ಬ್ಯಾಗ್‌ಗಳನ್ನು ಒದಗಿಸಲಾಗಿದೆ.
ಎರಡನೇ ಚಟುವಟಿಕೆ ಲೈನ್ ಟ್ರಾನ್ಸೆಕ್ಸ್ ಸಮೀಕ್ಷೆಯಾಗಿದ್ದು, ಪ್ರತಿ ಅರಣ್ಯ ಬೀಟ್‌ನಲ್ಲಿ 2 ಕಿ.ಮೀ ಉದ್ದದ ರೇಖೆಯಲ್ಲಿ ನಾಲ್ಕು ದಿನಗಳ ಕಾಲ ಸಮೀಕ್ಷೆ ನಡೆಯುತ್ತಿದೆ. ಜಿಂಕೆ, ಸಾಂಬಾರ್, ಕಾಟಿ, ಕಾಡು ಹಂದಿ ಸೇರಿದಂತೆ ಸಸ್ಯಹಾರಿ ಪ್ರಾಣಿಗಳ ನೇರ ವೀಕ್ಷಣೆಗಳನ್ನು ದಾಖಲಿಸಲಾಗುತ್ತಿದೆ. ಈ ಕಾರ್ಯಕ್ಕಾಗಿ ಸೀ-ಥ ಕಂಪಾಸ್ ಮತ್ತು ರೇಂಜ್ ಫೈಂಡರ್ ಉಪಕರಣಗಳನ್ನು ಬಳಸಲಾಗುತ್ತಿದೆ. ರಾಜ್ಯಾದ್ಯಂತ 54 ಅರಣ್ಯ ವಿಭಾಗಗಳಲ್ಲಿ ಐದು ಬ್ಲಾಕ್‌ಗಳಲ್ಲಿ ಈ ಸಮೀಕ್ಷೆ ನಡೆಯುತ್ತಿದ್ದು, ಒಟ್ಟು ಸುಮಾರು 9276 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಹಂತ 2ರಲ್ಲಿ ಕ್ಯಾಮೆರಾ ಟ್ರಾಪ್ ಸಮೀಕ್ಷೆ ನಡೆಯಲಿದ್ದು, ಹುಲಿಗಳ ಸಂಚಾರವಿರುವ ಸ್ಥಳಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಕರ್ನಾಟಕದ ಐದು ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಒಟ್ಟು 2230 ಕ್ಯಾಮೆರಾ ಟ್ರಾಪ್ ಗಳನ್ನು ಬಳಸಲಾಗುತ್ತಿದೆ.
ಉಪ್ಪಿನಂಗಡಿ ವಲಯ ಅರಣ್ಯ ವ್ಯಾಪ್ತಿಯಲ್ಲಿಯೂ ಹುಲಿ ಸಮೀಕ್ಷೆ ಆರಂಭಗೊಂಡಿದ್ದು, ಸುಮಾರು 19 ತಂಡಗಳನ್ನು ರಚಿಸಲಾಗಿದೆ. ಜ.5ರಿಂದ ಪ್ರತಿ ತಂಡ ಮೂರು ದಿನಗಳ ಕಾಲ ದಿನಕ್ಕೆ ಐದು ಕಿ.ಮೀ. ಅರಣ್ಯ ಪ್ರದೇಶದಲ್ಲಿ ಸಂಚರಿಸಿ ಸಮೀಕ್ಷೆ ನಡೆಸುತ್ತಿದೆ.
-ರಾಘವೇಂದ್ರ ಎಚ್.ಪಿ.,ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ





