SSLC ವಿದ್ಯಾರ್ಥಿಗಳೇ ಎಚ್ಚರ! ಹಣ ಕೊಟ್ರೆ ಪ್ರಶ್ನೆ ಪತ್ರಿಕೆ ಸಿಗತ್ತೆ ಅಂತಾ ಯಾಮಾರಬೇಡಿ

ಶೇರ್ ಮಾಡಿ

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕಿಡಗೇಡಿಗಳು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡುತ್ತಿದ್ದಾರೆ. ಪ್ರಶ್ನೆ ಪತ್ರಿಕೆ ಲೀಕ್ ಮಾಡುತ್ತೇವೆ ಎಂದು ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್‌ನಲ್ಲಿ ಪೋಸ್ಟ್‌ಗಳು, ವೀಡಿಯೊಗಳು ಹಾಗೂ ಬಯೋಗಳಲ್ಲಿ ಪ್ರಕಟಿಸಿ, ಹಣ ಕೇಳಿ ವಿದ್ಯಾರ್ಥಿಗಳನ್ನು ಯಾಮಾರಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ.

ನೂರು ರೂ. ಕೊಟ್ಟರೆ ಸಿಗುತ್ತೆ ಪ್ರಶ್ನೆ ಪತ್ರಿಕೆ
ಈಗಾಗಲೇ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಮೊದಲನೇ ಹಂತದ ಪೂರ್ವ ಸಿದ್ಧತಾ ಪರೀಕ್ಷೆಗಳು ಆರಂಭವಾಗಿದ್ದು, ಮಾರ್ಚ್​ನಿಂದ ಮುಖ್ಯ ಪರೀಕ್ಷೆ ಆರಂಭವಾಗಲಿದೆ. ಇದರ ನಡುವೆ ಕೆಲ ಕಿಡಗೇಡಿಗಳು ಎಸ್‌ಎಸ್‌ಎಲ್‌ಸಿ, ಪೂರ್ವಭಾವಿ ಪ್ರಶ್ನೆ ಪತ್ರಿಕೆ ಲೀಕ್ ಮಾಡತ್ತೇವೆಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. 100 ರೂಪಾಯಿ ಫೋನ್‌ಪೇ ಅಥವಾ ಆನ್‌ಲೈನ್ ಪಾವತಿ ಮಾಡಿದರೆ ಪ್ರಶ್ನೆ ಪತ್ರಿಕೆ ಕಳುಹಿಸುತ್ತೇವೆ ಎಂದು ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಈ ರೀತಿ ಲೀಕ್​ ಆಗುತ್ತಿರುವ ಪ್ರಶ್ಬೆ ಪತ್ರಿಕೆಗಳು ಸಂಪೂರ್ಣ ನಕಲಿಯಾಗಿದ್ದು, ವಿದ್ಯಾರ್ಥಿಗಳು ತಮ್ಮ ಅಮೂಲ್ಯ ಸಮಯದೊಂದಿಗೆ ಹಣವನ್ನೂ ಕಳೆದುಕೊಳ್ಳುತ್ತಿದ್ದಾರೆ.

ಈ ರೀತಿಯ ವದಂತಿಗಳಿಂದ ಲಕ್ಷಾಂತರ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದು, ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಮಾತು ಕೇಳಿ ವಿದ್ಯಾರ್ಥಿಗಳು ಆತುರಕ್ಕೆ ಒಳಗಾಗಿ ಮೋಸ ಹೋಗಬಾರದು ಎಂದು ಶಿಕ್ಷಣ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಕಿಡಗೇಡಿಗಳ ವಿರುದ್ಧ ದೂರು
ಖಾಸಗಿ ಶಿಕ್ಷಣ ಇಲಾಖೆ ಹಾಗೂ ಅಸೋಸಿಯೇಟೆಡ್ ಮ್ಯಾನೇಜ್‌ಮೆಂಟ್ ಆಫ್ ಪ್ರೈಮರಿ ಅಂಡ್ ಸೆಕೆಂಡರಿ ಸ್ಕೂಲ್ಸ್ ಇನ್ ಕರ್ನಾಟಕ ಸಂಘಟನೆಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿದ್ದು, ಕಿಡಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿವೆ. ವಿದ್ಯಾರ್ಥಿಗಳು ಯಾವುದೇ ಸುಳ್ಳು ಪ್ರಚಾರಕ್ಕೆ ಬಲಿಯಾಗದೆ ಅಧಿಕೃತ ಮಾಹಿತಿ ಮೇಲೆ ಮಾತ್ರ ನಂಬಿಕೆ ಇಡಬೇಕು ಎಂದು ಮನವಿ ಮಾಡಲಾಗಿದೆ.

Leave a Reply

error: Content is protected !!