

ನೆಲ್ಯಾಡಿ: ಗ್ರಾಮೀಣ ಪ್ರದೇಶದ ಜನರಿಗೆ ಆರೋಗ್ಯ ಜಾಗೃತಿ ಹಾಗೂ ಮುನ್ನೆಚ್ಚರಿಕಾ ತಪಾಸಣೆ ಅತ್ಯಂತ ಅಗತ್ಯವೆಂಬ ಉದ್ದೇಶದಿಂದ ನೆಲ್ಯಾಡಿ ಅಶ್ವಿನಿ ಆಸ್ಪತ್ರೆಯಲ್ಲಿ ಶುಕ್ರವಾರ ಉಚಿತ ಎಲುಬಿನ ಖನಿಜ ಸಾಂದ್ರತೆ ಪರೀಕ್ಷಾ ಶಿಬಿರ ಹಾಗೂ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
ಶಿಬಿರವನ್ನು ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಗಂಗಾಧರ ಶೆಟ್ಟಿ ಹೊಸಮನೆ ಅವರು ಉದ್ಘಾಟಿಸಿ ಮಾತನಾಡಿದ ಅವರು ಇಂದಿನ ಒತ್ತಡದ ಜೀವನಶೈಲಿ, ಆಹಾರ ಪದ್ಧತಿ ಹಾಗೂ ವ್ಯಾಯಾಮದ ಕೊರತೆಯಿಂದ ಎಲುಬು ಮತ್ತು ಕಣ್ಣು ಸಂಬಂಧಿತ ಸಮಸ್ಯೆಗಳು ಹೆಚ್ಚುತ್ತಿವೆ. ಇಂತಹ ಉಚಿತ ಆರೋಗ್ಯ ಶಿಬಿರಗಳು ರೋಗವನ್ನು ಮೊದಲ ಹಂತದಲ್ಲೇ ಗುರುತಿಸಲು ಸಹಕಾರಿಯಾಗುತ್ತವೆ. ಜನರು ಈ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಮುರಳಿಧರ.ವೈ.ಕೆ., ವಹಿಸಿದ್ದರು. ಅವರು ಮಾತನಾಡಿ ಎಲುಬಿನ ಖನಿಜ ಸಾಂದ್ರತೆ ಪರೀಕ್ಷೆ ಮೂಲಕ ಆಸ್ಟಿಯೋಪೊರೋಸಿಸ್ ಮುಂತಾದ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಲು ಸಾಧ್ಯವಿದೆ. ಅದೇ ರೀತಿ ಕಣ್ಣಿನ ತಪಾಸಣೆ ದೃಷ್ಟಿ ಸಮಸ್ಯೆಗಳನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಎಲುಬಿನ ಆರೋಗ್ಯದ ಕುರಿತು ಡಾ. ಶಮಂತ್ ಅವರು ಮಾಹಿತಿ ನೀಡಿದರು. ಸರಿಯಾದ ಆಹಾರ, ಕ್ಯಾಲ್ಸಿಯಂ ಹಾಗೂ ವಿಟಮಿನ್–ಡಿ ಮಹತ್ವ, ನಿಯಮಿತ ವ್ಯಾಯಾಮದಿಂದ ಎಲುಬಿನ ಬಲವನ್ನು ಕಾಪಾಡಿಕೊಳ್ಳುವ ಕುರಿತು ವಿವರಿಸಿದರು. ಕಣ್ಣಿನ ಆರೋಗ್ಯದ ಕುರಿತು ಡಾ.ಅಶ್ವಿನ್ ಸಾಗರ್ ಅವರು ಮಾತನಾಡಿ, ನಿಯಮಿತ ಕಣ್ಣಿನ ತಪಾಸಣೆ, ಮೊಬೈಲ್ ಮತ್ತು ಡಿಜಿಟಲ್ ಪರದೆಗಳ ಬಳಕೆಯಲ್ಲಿ ಎಚ್ಚರಿಕೆ ಅಗತ್ಯವಿದೆ ಎಂದು ತಿಳಿಸಿದರು. ನಿವೃತ್ತ ಕಣ್ಣಿನ ಪರೀಕ್ಷಕರು ಎಸ್. ಶಾಂತರಾಜ್ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಶಿಬಿರದಲ್ಲಿ ಸುಮಾರು 70 ಮಂದಿ ಎಲುಬಿನ ಖನಿಜ ಸಾಂದ್ರತೆ ಪರೀಕ್ಷೆ ಹಾಗೂ ಸುಮಾರು 60 ಮಂದಿ ಕಣ್ಣಿನ ತಪಾಸಣೆಯಲ್ಲಿ ಭಾಗವಹಿಸಿ ಇದರ ಪ್ರಯೋಜನ ಪಡೆದುಕೊಂಡರು. ಫಾರ್ಮೆಟ್ ಕಂಪನಿಯವರು ಎಲುಬಿನ ಖನಿಜ ಸಾಂದ್ರತೆ ಪರೀಕ್ಷೆಯನ್ನು ನಡೆಸಿಕೊಟ್ಟರೆ, ಅಶ್ವಿನ್ ಆಪ್ಟಿಕಲ್ಸ್ ತಂಡವು ಕಣ್ಣಿನ ತಪಾಸಣೆಯನ್ನು ಯಶಸ್ವಿಯಾಗಿ ನೆರವೇರಿಸಿತು.







