ನೆಲ್ಯಾಡಿ: ಪರವಾನಗಿ ಇಲ್ಲದೆ ಮರ ಸಾಗಾಟ: ಲಾರಿ, ಚಾಲಕ ವಶಕ್ಕೆ

ಶೇರ್ ಮಾಡಿ

ನೆಲ್ಯಾಡಿ: ಉಪ್ಪಿನಂಗಡಿ ವಲಯದ ವ್ಯಾಪ್ತಿಯಲ್ಲಿ ಮರ ಅಕ್ರಮ ಸಾಗಾಟದ ವಿರುದ್ಧ ಅರಣ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮಮುಂದುವರಿಸಿದ್ದು ಗುರುವಾರ ಬೆಳಗಿನ ಜಾವ ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿ ಸಮೀಪದ ಪೆರಿಯಶಾಂತಿ ಪ್ರದೇಶದಲ್ಲಿ ನಾನಾ ಕಾಡು ಜಾತಿಯ ಮರಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ 10 ವೀಲ್ ನ ಲಾರಿಯನ್ನು ವಶಕ್ಕೆ ಪಡೆದುಕೊ೦ಡಿದೆ.

ಅರಣ್ಯ ಅಧಿಕಾರಿಗಳ ತಂಡ ಗಸ್ತು ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ, ಸಕಲೇಶಪುರದಿಂದ ಮಂಗಳೂರಿನ ಕಡೆಗೆ ಸಾಗುತ್ತಿದ್ದ ಶಂಕಾಸ್ಪದ ಲಾರಿಯನ್ನು ತಡೆದು ಪರಿಶೀಲನೆ ನಡೆಸಿದ್ದು, ಲಾರಿಯಲ್ಲಿ ಯಾವುದೇ ಪರವಾನಗಿ ಇಲ್ಲದೆ ಮರದ ದಿಮ್ಮಿಗಳನ್ನು ಸಾಗಿಸಲಾಗುತ್ತಿರುವುದು ಬೆಳಕಿಗೆ ಬಂದಿದೆ. ತಕ್ಷಣ ಲಾರಿಯನ್ನು ವಶಕ್ಕೆ ಪಡೆದು ಚಾಲಕ ಮಂಗಳೂರು ಸೋಮೇಶ್ವರ ನಿವಾಸಿ ಇಬ್ರಾಹಿಂ ಅವರ ಪುತ್ರ ರಫೀಕ್(50) ಎಂಬಾತನನ್ನು ಬಂಧಿಸಲಾಗಿದೆ.

ಈ ತಿಂಗಳಿನಲ್ಲಿ ಇದು ಎರಡನೇ ಪ್ರಕರಣವಾಗಿದೆ ಕಳೆದ ಮಂಗಳವಾರದಂದು ಇದೇ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ ಪರವಾನಗಿ ಇಲ್ಲದೆ ನಾನಾ ಕಾಡು ಜಾತಿಯ ಮರಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಲಾರಿ ಸಮೇತವಾಗಿ ಚಾಲಕನನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು.

ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಎಚ್.ಪಿ. ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆಯಲ್ಲಿ ಗಸ್ತು ವನಪಾಲಕರಾದ ವಿನಯಚಂದ್ರ, ಶಿವಾನಂದ ಕುದ್ರಿ, ವಾಹನ ಚಾಲಕ ಕಿಶೋರ್ ಹಾಗೂ ನೌಕರ ದಿನೇಶ್ ಭಾಗವಹಿಸಿದ್ದರು.

Leave a Reply

error: Content is protected !!