


ಬೆಳ್ತಂಗಡಿ: ಚಾರ್ಮಾಡಿ ಘಾಟಿಯ 2ನೇ ಹಾಗೂ 3ನೇ ತಿರುವಿನ ಮಧ್ಯಭಾಗದಲ್ಲಿ ಶುಕ್ರವಾರ ರಾತ್ರಿ ಕಾಡಾನೆ ಕಾಣಿಸಿಕೊಂಡ ಪರಿಣಾಮ ಸುಮಾರು ಒಂದು ತಾಸಿಗಿಂತ ಅಧಿಕ ಕಾಲ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡು ಭಾರೀ ಟ್ರಾಫಿಕ್ ಜಾಮ್ ಉಂಟಾಯಿತು.
ರಾತ್ರಿ ಸುಮಾರು 9.45ರ ವೇಳೆಗೆ ಕಾಡಾನೆ ರಸ್ತೆ ಬದಿಯ ಮರವನ್ನು ಮುರಿದು ಹಾಕಿ ರಸ್ತೆ ಮಧ್ಯಭಾಗದಲ್ಲೇ ನಿಂತು ಆಹಾರ ಸೇವಿಸುತ್ತಿರುವುದು ಕಂಡುಬಂದಿತು. ಈ ವೇಳೆ ಸ್ಥಳದಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರು ಕಾಡಾನೆಯನ್ನು ಅಟ್ಟಲು ಪ್ರಯತ್ನಿಸಿದರೂ ಕಾಡಾನೆ ಸ್ಥಳವನ್ನು ಬಿಟ್ಟುಕೊಡದೆ ನಿಂತ ಕಾರಣ ರಸ್ತೆ ಎರಡೂ ಕಡೆಗಳಲ್ಲಿ ವಾಹನಗಳ ಸಾಲುಗಳು ಉದ್ದಗಲಾಗಿ ನಿರ್ಮಾಣವಾಯಿತು.
ಕಾಡಾನೆ ಕಾಣಿಸಿಕೊಂಡ ಸ್ಥಳದಲ್ಲಿ ಮೊಬೈಲ್ ನೆಟ್ವರ್ಕ್ ವ್ಯವಸ್ಥೆ ಲಭ್ಯವಿರದ ಕಾರಣ ಅರಣ್ಯ ಇಲಾಖೆಗೆ ಮಾಹಿತಿ ನೀಡಲು ಸಾರ್ವಜನಿಕರು ಹಾಗೂ ವಾಹನ ಸವಾರರು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ನಂತರ ಕಾಡಾನೆ ಅರಣ್ಯ ಪ್ರದೇಶದೊಳಗೆ ತೆರಳಿದ ಬಳಿಕ ವಾಹನ ಸಂಚಾರ ಸಹಜ ಸ್ಥಿತಿಗೆ ಮರಳಿತು.
ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಕಾಡಾನೆ ಸಂಚಾರ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾತ್ರಿ ವೇಳೆ ವಾಹನ ಸವಾರರು ಹೆಚ್ಚಿನ ಎಚ್ಚರಿಕೆ ವಹಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.






