


ಬೆಳ್ತಂಗಡಿ: ಚಾರ್ಮಾಡಿ ಘಾಟಿಯಲ್ಲಿ ಬುಧವಾರ ಮುಂಜಾನೆ ಸುಮಾರು 3 ಗಂಟೆಯ ವೇಳೆಗೆ ಸಾಗುತ್ತಿದ್ದ ಲಾರಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಲಾರಿ ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ನಡೆದಿದೆ.
ಜಾವಗಲ್‌ನಿಂದ ಕುಂದಾಪುರದ ಕಡೆಗೆ ಮೆಕ್ಕೆಜೋಳದ ಲೋಡ್ ಸಾಗಿಸುತ್ತಿದ್ದ ಲಾರಿಯಲ್ಲಿದ್ದ ಚಾಲಕ ಸೇರಿ ಮೂವರು ಲಾರಿಯಿಂದ ತಕ್ಷಣ ಹೊರಬಂದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಲಾರಿಗೆ ಹೊತ್ತಿಕೊಂಡ ಬೆಂಕಿ ರಸ್ತೆ ಬದಿಯ ಸಮೀಪದ ಅರಣ್ಯ ಪ್ರದೇಶದತ್ತವೂ ವ್ಯಾಪಿಸಿದ ಕಾರಣ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಮಾಹಿತಿ ಪಡೆದ ಅಗ್ನಿಶಾಮಕ ದಳದ ಸಿಬ್ಬಂದಿ, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳೀಯರು ತಕ್ಷಣ ಸ್ಥಳಕ್ಕೆ ಧಾವಿಸಿ ಸಕಾಲಿಕವಾಗಿ ಕ್ರಮ ಕೈಗೊಂಡ ಪರಿಣಾಮ ಬೆಂಕಿಯನ್ನು ಹತೋಟಿಗೆ ತರಲಾಯಿತು.






