


ನೆಲ್ಯಾಡಿ: ನೆಲ್ಯಾಡಿ ಸಮೀಪದ ಬರೆಗುಡ್ಡೆ ತಿರುವಿನಲ್ಲಿ ಭಾನುವಾರ ಮುಂಜಾನೆ ಕಾರು ಅಪಘಾತ ಸಂಭವಿಸಿದೆ. ನೆಲ್ಯಾಡಿಯಿಂದ ಬಲ್ಯಕ್ಕೆ ತೆರಳುತ್ತಿದ್ದ ಉಮೇಶ್ ಎಂಬವರು ಚಲಾಯಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ, 11 ಕೆವಿ ವಿದ್ಯುತ್ ಪ್ರವಹಿಸುತ್ತಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ. ಡಿಕ್ಕಿಯ ತೀವ್ರತೆಗೆ ವಿದ್ಯುತ್ ಕಂಬ ಸಂಪೂರ್ಣವಾಗಿ ತುಂಡಾಗಿ ನೆಲಕ್ಕುರುಳಿದೆ.
ವಿದ್ಯುತ್ ಕಂಬ ತುಂಡಾಗಿ ಬಿದ್ದ ಪರಿಣಾಮ ಸುತ್ತಮುತ್ತಲ ಪ್ರದೇಶದ ಗ್ರಾಹಕರಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಯಿತು. ಮಾಹಿತಿ ಪಡೆದ ತಕ್ಷಣ ಸ್ಥಳಕ್ಕೆ ಆಗಮಿಸಿದ ಮೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ತಕ್ಷಣ ದುರಸ್ತಿ ಕಾರ್ಯ ಕೈಗೊಂಡು ವಿದ್ಯುತ್ ಸರಬರಾಜನ್ನು ಪುನಃಸ್ಥಾಪಿಸಿದರು.
ಅಪಘಾತದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.






