


ಕೊಕ್ಕಡ: ಇತ್ತೀಚೆಗೆ ಹೃದಯಘಾತದಿಂದ ನಿಧನರಾದ ಕೊಕ್ಕಡ ಗ್ರಾಮದ ಕೋರಿಗದ್ದೆ ನಿವಾಸಿ ದಿ. ಪದ್ಮನಾಭ ಆಚಾರ್ಯ ಅವರ ಕುಟುಂಬ ತೀವ್ರ ಆರ್ಥಿಕ ಸಂಕಷ್ಟದಲ್ಲಿತ್ತು. ವಾಸಿಸಲು ಯೋಗ್ಯವಾದ ಮನೆ ಇಲ್ಲದೆ, ಎರಡು ಹೆಣ್ಣು ಮಕ್ಕಳೊಂದಿಗೆ ಸಂಕಷ್ಟಕರ ಜೀವನ ನಡೆಸುತ್ತಿದ್ದ ಕುಟುಂಬದ ದುಸ್ಥಿತಿಯನ್ನು ಮನಗಂಡು ಕೊಕ್ಕಡದ ಸಮಾಜಸೇವಕರು ಮಾನವೀಯ ನೆರವಿಗೆ ಮುಂದಾದರು.
ಕೊಕ್ಕಡದ ಸಮಾಜಸೇವಕ ತುಕ್ರಪ್ಪ ಶೆಟ್ಟಿ ನೂಜೆ, ರಕ್ತೇಶ್ವರಿ ಪೆಟ್ರೋ ಪಾಯಿಂಟ್‌ನ ಮಾಲಕ ಉದ್ಯಮಿ ನಾರಾಯಣ ಗೌಡ, ಸೌತಡ್ಕ ಮಹಾಗಣಪತಿ ದೇವಳದ ಆಡಳಿತ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ, ಶಾಂತಪ್ಪ ಮಡಿವಾಳ, ರಜಾಕ್ ಕೊಕ್ಕಡ, ಜಾರ್ಜ್, ಮಾಜಿ ತಾಲೂಕು ಪಂಚಾಯಿತಿ ಸದಸ್ಯ, ಮೃತರ ಸಹೋದರ ದಿನೇಶ ಆಚಾರ್ಯ ಸೇರಿದಂತೆ ಹಲವು ಗಣ್ಯರು ಒಟ್ಟಾಗಿ ಕೈಜೋಡಿಸಿ, ದಿ.ಪದ್ಮನಾಭ ಆಚಾರ್ಯ ಅವರ ಪಾಳು ಬಿದ್ದ ಮೂಲ ಮನೆಯನ್ನು ದುರಸ್ತಿಗೊಳಿಸುವ ಕಾರ್ಯಕೈಗೊಂಡರು. ಸಹೃದಯ ಬಂಧುಗಳು ಹಾಗೂ ದಾನಿಗಳಿಂದ ಸುಮಾರು ಎರಡುವರೆ ಲಕ್ಷ ರೂ. ಮೊತ್ತದ ಹಣವನ್ನು ಸಂಗ್ರಹಿಸಿ, ಸುಮಾರು 50ಕ್ಕೂ ಅಧಿಕ ಮಂದಿ ಶ್ರಮದಾನ ಮಾಡುವ ಮೂಲಕ ಮನೆ ಸಂಪೂರ್ಣವಾಗಿ ದುರಸ್ತಿ ಮಾಡಲಾಯಿತು.
ದುರಸ್ತಿ ಕಾರ್ಯ ಪೂರ್ಣಗೊಂಡ ಬಳಿಕ ನಡೆದ ಸರಳ ಸಮಾರಂಭದಲ್ಲಿ ದಿ.ಪದ್ಮನಾಭ ಆಚಾರ್ಯ ಅವರ ಪತ್ನಿ ಶೋಭಾ ಅವರಿಗೆ ಮೃತರ ತಾಯಿ ಸುಶೀಲ ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಶಾಲಿನಿ ಶಾಂತಪ್ಪ ಮಡಿವಾಳ ಅವರು ಮನೆಯ ಕೀಲಿಕೈಯನ್ನು ಹಸ್ತಾಂತರಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ದಾನಿಗಳಾದ ತುಕ್ರಪ್ಪ ಶೆಟ್ಟಿ ನೂಜೆ, ರಕ್ತೇಶ್ವರಿ ಪೆಟ್ರೋ ಪಾಯಿಂಟ್‌ನ ಮಾಲಕ ನಾರಾಯಣ ಗೌಡ, ಕಿರಿಯರಾದ ಈಶ್ವರ ಭಟ್ ಹಿತ್ತಿಲು, ರಜಾಕ್ ಕೊಕ್ಕಡ, ಜಾರ್ಜ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಲಕ್ಷ್ಮೀನಾರಾಯಣ, ಶಾಂತಪ್ಪ ಮಡಿವಾಳ, ಲಾರೆನ್ಸ್ ಪಾೈಸ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದು, ಸಹಕಾರ ನೀಡಿದ ಎಲ್ಲರಿಗೂ ಕುಟುಂಬದ ಪರವಾಗಿ ಕೃತಜ್ಞತೆ ಸಲ್ಲಿಸಲಾಯಿತು.






