


ನೆಲ್ಯಾಡಿ: ನೆಲ್ಯಾಡಿ ಗ್ರಾಮ ಪಂಚಾಯತ್ ಎಸ್‌ಸಿ ಹಾಗೂ ಎಸ್‌ಟಿ ಅನುದಾನದಡಿ ಪಡುಬೆಟ್ಟು 4ನೇ ವಾರ್ಡ್‌ನ ಅರ್ಹ ಫಲಾನುಭವಿಗಳಿಗೆ ನೀರಿನ ಟ್ಯಾಂಕ್ ಹಾಗೂ ಅಂಗವಿಕಲರಿಗೆ ಫ್ಯಾನ್ ವಿತರಣೆ ಕಾರ್ಯಕ್ರಮ ಜ.11ರಂದು ಪಡುಬೆಟ್ಟುವಿನಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಸಲಾಂ ಬಿಲಾಲ್ ಅವರ ನಿವಾಸದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಸೌಲಭ್ಯಗಳನ್ನು ವಿತರಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸರ್ವೋತ್ತಮ ಗೌಡ ಅವರು, “ಎಸ್‌ಸಿ/ಎಸ್‌ಟಿ ಅನುದಾನದ ಸೌಲಭ್ಯವನ್ನು ಯಾವುದೇ ಪಕ್ಷಪಾತವಿಲ್ಲದೆ, ಅರ್ಹ ಫಲಾನುಭವಿಗಳ ಮನೆ ಮನೆಗೆ ತಲುಪಿಸುವ ಕೆಲಸವನ್ನು ಗ್ರಾ.ಪಂ. ಅಧ್ಯಕ್ಷ ಸಲಾಂ ಬಿಲಾಲ್ ಹಾಗೂ ವಾರ್ಡ್ ಸದಸ್ಯರು ಸಮರ್ಪಕವಾಗಿ ಮಾಡಿದ್ದಾರೆ. ನೆಲ್ಯಾಡಿ ಗ್ರಾಮ ಪಂಚಾಯಿತಿಯಲ್ಲಿ ಈವರೆಗೆ ಈ ರೀತಿಯ ಸಮಾನ ಹಂಚಿಕೆ ಕಂಡುಬಂದಿಲ್ಲ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಮಹಿಳಾ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷೆ ಉಷಾ ಅಂಚನ್, ನೆಲ್ಯಾಡಿ ವಲಯ ಕಾಂಗ್ರೆಸ್ ಅಧ್ಯಕ್ಷ ಜೋಸ್ ಕೆ.ಜೆ. ನೆಲ್ಯಾಡಿ ಹಾಗೂ ಕರಾಯ ಶಾಲೆಯ ಮುಖ್ಯಗುರು ಮಹಾಲಿಂಗ ಮಾಸ್ಟರ್ ಅವರು, ಪಡುಬೆಟ್ಟು ವಾರ್ಡ್‌ನಲ್ಲಿ ನಡೆಯುತ್ತಿರುವ ಅಭಿವೃದ್ಧಿ ಹಾಗೂ ಜನಪರ ಕಾರ್ಯಗಳಿಗೆ ವಾರ್ಡ್ ಸದಸ್ಯರ ಶ್ರಮವನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಸಲಾಂ ಬಿಲಾಲ್, ವಾರ್ಡ್ ಸದಸ್ಯರಾದ ಪುಷ್ಪ ಪಡುಬೆಟ್ಟು, ಜಯಲಕ್ಷ್ಮಿಪ್ರಸಾದ್, ಭೂ ನ್ಯಾಯ ಮಂಡಳಿ ಸದಸ್ಯ ಅಬ್ರಹಾಂ ವರ್ಗೀಸ್, ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯ ಸತೀಶ್ ಇಚಿಲಂಪಾಡಿ, ದಲಿತ ಮುಖಂಡರಾದ ಕೆ.ಪಿ. ಆನಂದ ಹಾಗೂ ಮಾರ್ಷಲ್ ಡಿಸೋಜ ಸೇರಿದಂತೆ ಫಲಾನುಭವಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ಉತ್ತಮ ಸೇವೆ ಸಲ್ಲಿಸುತ್ತಿರುವ ಗ್ರಾಮ ಪಂಚಾಯತ್ ಅಧ್ಯಕ್ಷ ಸಲಾಂ ಬಿಲಾಲ್ ಹಾಗೂ ಸದಸ್ಯರಾದ ಪುಷ್ಪ ಪಡುಬೆಟ್ಟು ಮತ್ತು ಜಯಲಕ್ಷ್ಮಿಪ್ರಸಾದ್ ಅವರನ್ನು ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು.






