ಕುಕ್ಕೆ ಸುಬ್ರಹ್ಮಣ್ಯ ಬೈಪಾಸ್ ರಸ್ತೆ ಬದಿಗಳಲ್ಲಿ ಕಸದ ರಾಶಿ – ಸ್ವಚ್ಛತಾ ಕಾರ್ಯ ಕೈಗೊಂಡ ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್

ಶೇರ್ ಮಾಡಿ

ಸುಬ್ರಹ್ಮಣ್ಯ: ಭಾರತದ ಪ್ರಮುಖ ನಾಗಾರಾಧನಾ ಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಡಿಸೆಂಬರ್–ಜನವರಿ ತಿಂಗಳಲ್ಲಿ ರಾಜ್ಯ ಹಾಗೂ ಹೊರರಾಜ್ಯಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಿದ್ದು, ಇದರ ಪರಿಣಾಮವಾಗಿ ಪಾರ್ಕಿಂಗ್ ಪ್ರದೇಶ ಹಾಗೂ ಬೈಪಾಸ್ ರಸ್ತೆ ಬದಿಗಳಲ್ಲಿ ಕಸದ ರಾಶಿಗಳು ಹೆಚ್ಚಾಗಿವೆ.

ದಿನನಿತ್ಯ ಸಾವಿರಾರು ವಾಹನಗಳು ಪಾರ್ಕಿಂಗ್ ಪ್ರದೇಶದಲ್ಲಿ ನಿಲ್ಲುತ್ತಿದ್ದು, ಭಕ್ತರು ಪ್ಲಾಸ್ಟಿಕ್ ಬಾಟಲು, ಚೀಲ, ತಟ್ಟೆ ಸೇರಿದಂತೆ ವಿವಿಧ ಕಸವನ್ನು ಎಲ್ಲೆಂದರಲ್ಲಿ ಎಸೆಯುತ್ತಿರುವುದು ಸಮಸ್ಯೆಯಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಕಳೆದ 523 ವಾರಗಳಿಂದ ನಿರಂತರವಾಗಿ ಸ್ವಚ್ಛತಾ ಕಾರ್ಯ ನಡೆಸುತ್ತಿರುವ ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಭಾನುವಾರ ಬೆಳ್ಳಂಬೆಳಗ್ಗೆಯೇ ವ್ಯಾಪಕ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು.

ಡಾ.ರವಿ ಕಕ್ಕೆಪದವು ಅವರ ನೇತೃತ್ವದಲ್ಲಿ ಸುಮಾರು 60ಕ್ಕೂ ಅಧಿಕ ಸ್ವಯಂಸೇವಕರು ಹಲವು ಗಂಟೆಗಳ ಕಾಲ ಬೈಪಾಸ್ ರಸ್ತೆ ಹಾಗೂ ಪಾರ್ಕಿಂಗ್ ಪ್ರದೇಶದಲ್ಲಿ ಸಂಗ್ರಹಗೊಂಡಿದ್ದ ಪ್ಲಾಸ್ಟಿಕ್ ಮತ್ತು ಕಸದ ತೆರವು ಕಾರ್ಯದಲ್ಲಿ ತೊಡಗಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ.ರವಿ ಕಕ್ಕೆಪದವು, “ಭಕ್ತಾದಿಗಳು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಬೇಕು. ತಂದಿರುವ ಪ್ಲಾಸ್ಟಿಕ್ ವಸ್ತುಗಳನ್ನು ಡಸ್ಟ್‌ಬಿನ್‌ಗಳಲ್ಲಿ ಹಾಕಬೇಕು ಅಥವಾ ತಮ್ಮ ಊರಿಗೆ ಮರಳಿ ಕೊಂಡೊಯ್ಯಬೇಕು. ಕ್ಷೇತ್ರದ ಪವಿತ್ರತೆ ಹಾಗೂ ಸ್ವಚ್ಛತೆಯನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ” ಎಂದು ಮನವಿ ಮಾಡಿದರು.

Leave a Reply

error: Content is protected !!