ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ರವಿವಾರ ದೇವಳದತ್ತ ಹರಿದು ಬಂದ ಭಕ್ತ ಸಾಗರ

ಶೇರ್ ಮಾಡಿ

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪ್ರತಿ ರವಿವಾರದಂತೆ ಈ ವಾರವೂ ದೇಶದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ದೇವರ ದರ್ಶನ ಹಾಗೂ ಸೇವೆಗಾಗಿ ಆಗಮಿಸಿ ದೇವಳ ಆವರಣ ಭಕ್ತ ಸಾಗರದಂತಾಯಿತು.

ದೇವಳದ ಮುಂಭಾಗದ ಗೋಪುರದಿಂದಲೇ ಜನಜಂಗುಲಿ ಆರಂಭಗೊಂಡು ಒಳಾಂಗಣದವರೆಗೂ ಗಂಟೆಗಟ್ಟಲೆ ಸರತಿಯ ಸಾಲಿನಲ್ಲಿ ಭಕ್ತರು ಶ್ರೀ ದೇವರ ದರ್ಶನಕ್ಕಾಗಿ ಕಾಯುತ್ತಿರುವುದು ಕಂಡುಬಂತು. ಭಕ್ತರ ಸಂಖ್ಯೆಯ ಹೆಚ್ಚಳದಿಂದ ಒಂದು ಹಂತದಲ್ಲಿ ಹೊರಾಂಗಣ ಪ್ರವೇಶ ದ್ವಾರದಲ್ಲಿ ಭಕ್ತರ ಸರತಿಯನ್ನು ಕೆಲಕಾಲ ತಾತ್ಕಾಲಿಕವಾಗಿ ನಿಲ್ಲಿಸಿ ನಂತರ ಹಂತ ಹಂತವಾಗಿ ದರ್ಶನಕ್ಕೆ ಅವಕಾಶ ನೀಡಲಾಯಿತು.

ಭಕ್ತರಿಗೆ ಸುಗಮ ದರ್ಶನ ಒದಗಿಸಲು ದೇವಳದ ಸಿಬ್ಬಂದಿ, ಭದ್ರತಾ ಸಿಬ್ಬಂದಿ ಹಾಗೂ ಅಧಿಕಾರಿಗಳ ತಂಡ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದುದು ಗಮನಾರ್ಹವಾಗಿತ್ತು. ಪ್ರಸಾದ ಕೊಠಡಿಯಲ್ಲಿ ಶ್ರೀ ದೇವರ ಲಡ್ಡು, ಪಂಚಗಜ್ಜಾಯ ಹಾಗೂ ತೀರ್ಥ ಬಾಟಲಿ ಪಡೆಯಲು ಭಕ್ತರ ದೀರ್ಘ ಸಾಲು ಕಂಡುಬಂತು.

ದೇವಳದ ಗೋಪುರದ ಮುಂದೆ ಇರುವ ರಥಬೀದಿಯಲ್ಲಿ ಭಕ್ತರ ಸಮೂಹವೇ ಜಮಾಯಿಸಿತ್ತು. ಎಲ್ಲಾ ವಾಹನ ಪಾರ್ಕಿಂಗ್ ಪ್ರದೇಶಗಳು ತುಂಬಿ ತುಳುಕಿದ್ದು, ಆದಿ ಸುಬ್ರಹ್ಮಣ್ಯ ದೇವಳಕ್ಕೆ ತೆರಳುವ ಭಕ್ತರು ದೇವಳದ ಹೊರಬಾಗಿಲಿನಿಂದ ಸಾಲು ಸಾಲಾಗಿ ಹೋಗಿ ದರ್ಶನ ಪಡೆದು ವಾಪಸ್ ಬರುತ್ತಿದ್ದುದು ಕಂಡುಬಂತು. ಆದಿ ಸುಬ್ರಹ್ಮಣ್ಯ ದೇವಳದಲ್ಲೂ ಭಕ್ತರ ದರ್ಶನಕ್ಕೆ ಅಗತ್ಯ ವ್ಯವಸ್ಥೆಗಳನ್ನು ಸಿಬ್ಬಂದಿಯವರು ಕೈಗೊಂಡಿದ್ದರು.

ಇದರ ನಡುವೆ ಶಬರಿಮಲೆಗೆ ತೆರಳುವ ಅಯ್ಯಪ್ಪಸ್ವಾಮಿ ಭಕ್ತರು ಗುಂಪು ಗುಂಪಾಗಿ ದೇವಳ ಆವರಣ, ರಥಬೀದಿ ಹಾಗೂ ಪಾರ್ಕಿಂಗ್ ಪ್ರದೇಶಗಳಲ್ಲಿ ಕಾಣಿಸಿಕೊಂಡರು. ಬೆಳಗ್ಗೆ 8 ಗಂಟೆಯಿಂದ 10.30ರವರೆಗೆ ಉಪಹಾರ ವ್ಯವಸ್ಥೆ ಹಾಗೂ ಬೆಳಗ್ಗೆ 11 ಗಂಟೆಗೆ ಮಧ್ಯಾಹ್ನದ ಅನ್ನಸಂತರ್ಪಣೆಯ ವ್ಯವಸ್ಥೆಯನ್ನು ಶ್ರೀ ದೇವಳದವರು ಕಲ್ಪಿಸಿದ್ದರು.

Leave a Reply

error: Content is protected !!