


ನೆಲ್ಯಾಡಿ: ಕಡಬ ತಾಲೂಕು ನೆಲ್ಯಾಡಿಯ ಜ್ಞಾನೋದಯ ಬೆಥನಿ ಪಿಯು ಕಾಲೇಜು ಆವರಣದಲ್ಲಿ ಕೆಜಿ ವಿಭಾಗದ ಮಕ್ಕಳ ಸಮಗ್ರ ಬೆಳವಣಿಗೆಯನ್ನು ಉದ್ದೇಶಿಸಿಕೊಂಡು ‘ಕ್ರೀಡೋ ಲ್ಯಾಬ್’ ಅನ್ನು ಸ್ಥಾಪಿಸಲಾಗಿದ್ದು, ಇದರ ಉದ್ಘಾಟನಾ ಕಾರ್ಯಕ್ರಮವು ಜ.20ರಂದು ಬೆಳಿಗ್ಗೆ 10.00 ಗಂಟೆಗೆ ನಡೆಯಲಿದೆ.
ಕಾರ್ಯಕ್ರಮವನ್ನು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಮ್ಯಾಗ್ ಕ್ರಿಸ್ಟೋಫ್ ಎಡರ್, ಹೆರ್ ಅಂಟನ್ ಮೊಬ್ ಹ್ಯಾಮರ್ ಹಾಗೂ ಡಾ.ಸೆಬಾಸ್ಟಿಯನ್ ಎಡರ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಕೆಜಿ ಮಕ್ಕಳಲ್ಲಿ ಸೃಜನಶೀಲತೆ, ಚಿಂತನಾ ಸಾಮರ್ಥ್ಯ, ಚಲನ ಕೌಶಲ್ಯ ಮತ್ತು ಕಲಿಕಾಸಕ್ತಿಯನ್ನು ವೃದ್ಧಿಸುವ ಉದ್ದೇಶದಿಂದ ರೂಪಿಸಲಾದ ‘ಕ್ರೀಡೋ ಲ್ಯಾಬ್’ ಆಧುನಿಕ ಕಲಿಕಾ ಸೌಲಭ್ಯಗಳನ್ನು ಒಳಗೊಂಡಿದೆ. ಶಿಕ್ಷಣ ಕ್ಷೇತ್ರದಲ್ಲಿ ನವೀನ ಪ್ರಯೋಗಗಳ ಮೂಲಕ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಜ್ಞಾನೋದಯ ಬೆಥನಿ ಪಿಯು ಕಾಲೇಜು ಸದಾ ಮುಂಚೂಣಿಯಲ್ಲಿರುವುದಾಗಿ ಕಾಲೇಜು ಆಡಳಿತ ಮಂಡಳಿ ತಿಳಿಸಿದೆ.
ಶಿಕ್ಷಣಾಸಕ್ತರು, ಪಾಲಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕಾಲೇಜು ಆಡಳಿತ ಮಂಡಳಿ ಮನವಿ ಮಾಡಿದೆ.






