ನೆಲ್ಯಾಡಿ: ಮಣ್ಣಗುಂಡಿ ಅರಣ್ಯ ನಾಟ ಸಂಗ್ರಹ ಕೇಂದ್ರಕ್ಕೆ ವಿದ್ಯಾರ್ಥಿಗಳ ಭೇಟಿ: ಅರಣ್ಯ–ಪರಿಸರ ಜಾಗೃತಿ ಮಾಹಿತಿ ಸಂಗ್ರಹ

ಶೇರ್ ಮಾಡಿ

ನೆಲ್ಯಾಡಿ: ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿಗಳ ವ್ಯಾಪ್ತಿಗೆ ಒಳಪಡುವ ಮಣ್ಣಗುಂಡಿ ಪ್ರದೇಶದಲ್ಲಿರುವ ಅರಣ್ಯ ಇಲಾಖೆಯ ನಾಟ ಸಂಗ್ರಹ ಕೇಂದ್ರಕ್ಕೆ ಹೊಸಮಜಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುಮಾರು 70 ವಿದ್ಯಾರ್ಥಿಗಳು ಅಧ್ಯಯನ ಪ್ರವಾಸ ಕೈಗೊಂಡು ಅರಣ್ಯ ಹಾಗೂ ಪರಿಸರ ಸಂರಕ್ಷಣೆಯ ಕುರಿತು ಉಪಯುಕ್ತ ಮಾಹಿತಿಯನ್ನು ಪಡೆದುಕೊಂಡರು.

ಭೇಟಿಯ ವೇಳೆ ಅರಣ್ಯ ಇಲಾಖೆಯ ಅಧಿಕಾರಿಗಳು ನಾಟ ಸಂಗ್ರಹ ಕೇಂದ್ರದಲ್ಲಿರುವ ವಿವಿಧ ಮರಗಳ ಸಂಗ್ರಹ, ಅವುಗಳ ಜಾತಿಗಳು, ಪ್ರತಿಯೊಂದು ಮರದ ವೈಶಿಷ್ಟ್ಯ, ಉಪಯೋಗ ಹಾಗೂ ಅರಣ್ಯ ಸಂಪತ್ತಿನ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಿದರು. ಜೊತೆಗೆ ಅರಣ್ಯ ಸಂರಕ್ಷಣೆ, ಪರಿಸರ ಸಮತೋಲನ ಕಾಪಾಡುವಲ್ಲಿ ಮರಗಳ ಪಾತ್ರ, ವನ್ಯಜೀವಿ ರಕ್ಷಣೆ ಮತ್ತು ಮಾನವನ ಜವಾಬ್ದಾರಿಗಳ ಕುರಿತು ಪ್ರಾಯೋಗಿಕ ಹಾಗೂ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಮಾಹಿತಿ ನೀಡಿದರು.

ವಿದ್ಯಾರ್ಥಿಗಳು ಕೇಂದ್ರದಲ್ಲಿನ ನಾಟಗಳನ್ನು ನೇರವಾಗಿ ವೀಕ್ಷಿಸಿ, ಮರಗಳನ್ನು ಬೆಳೆಸುವ ವಿಧಾನ, ನಾಟಗಳ ಪಾಲನೆ ಹಾಗೂ ಅರಣ್ಯ ಅಭಿವೃದ್ಧಿಯಲ್ಲಿ ಅರಣ್ಯ ಇಲಾಖೆಯ ಪಾತ್ರದ ಬಗ್ಗೆ ಕುತೂಹಲದಿಂದ ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಯತೀಂದ್ರ, ಪ್ರವೀಣ್, ವಿನಯ್, ಅರಣ್ಯ ಗಸ್ತು ಪಾಲಕಿ ದೀಕ್ಷಾ, ಪಾಲಕ ಸುನೀಲ್ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಜೊತೆಗೆ ಶಾಲೆಯ ಮುಖ್ಯಶಿಕ್ಷಕಿ ಪ್ರೇಮ ಹಾಗೂ ಶಿಕ್ಷಕಿಯರು ವಿದ್ಯಾರ್ಥಿಗಳೊಂದಿಗೆ ಭಾಗವಹಿಸಿ ಕಾರ್ಯಕ್ರಮಕ್ಕೆ ಸಹಕಾರ ನೀಡಿದರು.

Leave a Reply

error: Content is protected !!