


ಕಡಬ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.) ವತಿಯಿಂದ ಕಡಬ ತಾಲ್ಲೂಕಿನ ಕಡಬ ವಲಯದಲ್ಲಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಸಂಕಲ್ಪದಂತೆ ಹತ್ತನೇ ವರ್ಷದ “ನಮ್ಮಊರು–ನಮ್ಮ ಶ್ರದ್ಧಾ ಕೇಂದ್ರ” ಸ್ವಚ್ಛತಾ ಕಾರ್ಯಕ್ರಮವು ಜ.14ರ ಮಕರ ಸಂಕ್ರಾಂತಿ ಹಬ್ಬದ ಮುನ್ನ ವಿವಿಧ ಶ್ರದ್ಧಾ ಕೇಂದ್ರಗಳು ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಭಕ್ತಿಪೂರ್ವಕವಾಗಿ ನಡೆಯಿತು.
ಸ್ವಚ್ಛತೆ, ಶ್ರದ್ಧೆ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಒಟ್ಟುಗೂಡಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾದ ಈ ಸ್ವಚ್ಛತಾ ಸಪ್ತಾಹ ಕಾರ್ಯಕ್ರಮದಡಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕಡಬ, ಮುರಾಜೆ ಶ್ರೀ ಅಯ್ಯಪ್ಪ ಭಜನಾ ಮಂದಿರ, ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನ ಕಡಬ, ಶ್ರೀ ಕ್ಷೇತ್ರ ನಾಕೂರು ಗಯಾ ಪುಳಿಕುಕ್ಕು, ಶ್ರೀ ಆದಿನಾಗಬ್ರಹ್ಮಗಡಿ ಮುಗೆರ್ಕಳ ಮತ್ತು ಸಹಪರಿವಾರ ದೈವಸ್ಥಾನ ಕಕ್ಕೆನಡ್ಕ, ಶ್ರೀ ಬ್ರಹ್ಮ ಮುಗೆರ್ಕಳ ಹಾಗೂ ಸ್ವಾಮಿ ಕೊರಗಜ್ಜ ದೈವಸ್ಥಾನ ಕೊಡಿಂಬಾಳ, ಶ್ರೀ ಉಮಾಮಹೇಶ್ವರಿ ದೇವಸ್ಥಾನ ಬಲ್ಯ, ಶ್ರೀ ಮಹಾವಿಷ್ಣು ದೇವಸ್ಥಾನ ಪಿಜಕಳ, ರಾಜನ್ ದೈವಸ್ಥಾನ ಪುಂಡಿತ್ ಮಾಡ ಗೋಳಿಯಡ್ಕ ರೆಂಜಿಲಾಡಿ ಸೇರಿದಂತೆ ಹಲವಾರು ಶ್ರದ್ಧಾ ಕೇಂದ್ರಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು.
ಕಾರ್ಯಕ್ರಮದ ಸಂದರ್ಭದಲ್ಲಿ ದೇವಸ್ಥಾನಗಳ ಆವರಣ, ಪ್ರವೇಶ ದ್ವಾರಗಳು, ಸುತ್ತಮುತ್ತಲ ಪರಿಸರ ಹಾಗೂ ಸಾರ್ವಜನಿಕ ಬಳಕೆಯ ಸ್ಥಳಗಳನ್ನು ಸ್ವಚ್ಛಗೊಳಿಸಿ ಸ್ವಚ್ಛತಾ ಜಾಗೃತಿ ಮೂಡಿಸಲಾಯಿತು. ಈ ಅಭಿಯಾನವು ಭಕ್ತರಲ್ಲಿ ಪರಿಸರ ಕಾಳಜಿ ಹಾಗೂ ಶ್ರದ್ಧಾ ಕೇಂದ್ರಗಳ ಪಾವಿತ್ರ್ಯ ಕಾಪಾಡುವ ಸಂದೇಶವನ್ನು ನೀಡಿತು.
ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ವಲಯದ ಮೇಲ್ವಿಚಾರಕರು, ಒಕ್ಕೂಟದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಒಕ್ಕೂಟದ ಸರ್ವ ಸದಸ್ಯರು, ವಿವಿಧ ದೇವಸ್ಥಾನ ಸಮಿತಿಗಳ ಅಧ್ಯಕ್ಷರು ಮತ್ತು ಸದಸ್ಯರು, ಶೌರ್ಯ ತಂಡದ ಸದಸ್ಯರು ಹಾಗೂ ಸೇವಾಪ್ರತಿನಿಧಿಗಳು ಸಕ್ರಿಯವಾಗಿ ಭಾಗವಹಿಸಿ ಶ್ರಮದಾನ ಮಾಡಿದರು.






