


ನೆಲ್ಯಾಡಿ: ರಾಷ್ಟ್ರೀಯ ಹೆದ್ದಾರಿ 75ರ ಉದನೆ ನರ್ಸರಿಯ ಬಳಿ ಸೋಮವಾರ ಸಂಜೆ ಸುಮಾರು 5:30ರ ಹೊತ್ತಿಗೆ ಕಾಡಾನೆ ಕಾಣಿಸಿಕೊಂಡು ಪ್ರಯಾಣಿಕರು ಹಾಗೂ ಸ್ಥಳೀಯರಲ್ಲಿ ಭೀತಿಯ ವಾತಾವರಣ ನಿರ್ಮಾಣವಾಯಿತು.
ಸಂಜೆಯ ಸಮಯದಲ್ಲಿ ಹೆದ್ದಾರಿಯ ಸಮೀಪವೇ ಆನೆ ಕಾಣಿಸಿಕೊಂಡು ಕೆಲಕಾಲ ವಾಹನ ಸವಾರರು ಆತಂಕದಿಂದ ವಾಹನಗಳನ್ನು ನಿಲ್ಲಬೇಕಾದ ಸ್ಥಿತಿ ಉಂಟಾಯಿತು. ಇದಾದ ಬಳಿಕ ರಾತ್ರಿ ವೇಳೆಯಲ್ಲಿ ಆನೆ ಸಮೀಪದ ಕೃಷಿ ತೋಟಗಳಿಗೆ ನುಗ್ಗಿ ಭಾರೀ ಹಾನಿ ಮಾಡಿದೆ. ಎಂಜಿರ ಬೂಡು ನಿವಾಸಿ ಸತ್ಯನಾರಾಯಣ ಭಟ್ ಎಂಬವರ ಕೃಷಿ ತೋಟಕ್ಕೆ ದಾಳಿ ನಡೆಸಿದ ಆನೆ, ಸುಮಾರು 50ಕ್ಕೂ ಹೆಚ್ಚು ಬಾಳೆಗಿಡಗಳು ಹಾಗೂ 10ಕ್ಕಿಂತ ಅಧಿಕ ಅಡಿಕೆ ಗಿಡಗಳನ್ನು ಸಂಪೂರ್ಣವಾಗಿ ನಾಶಪಡಿಸಿದೆ. ಪಕ್ಕದಲ್ಲೇ ಇರುವ ಕಿಟ್ಟಣ್ಣ ಶೆಟ್ಟಿ ಎಂಬುವರ ಕೃಷಿ ತೋಟಕ್ಕೂ ಆನೆ ನುಗ್ಗಿದ್ದು, ಸುಮಾರು 50ಕ್ಕೂ ಅಧಿಕ ಬಾಳೆಗಿಡಗಳು, ಫಲ ಕೊಡುತ್ತಿದ್ದ ತೆಂಗಿನ ಮರ ಹಾಗೂ 20ಕ್ಕೂ ಹೆಚ್ಚು ಅಡಿಕೆ ಗಿಡಗಳನ್ನು ಧ್ವಂಸಗೊಳಿಸಿದೆ.
ನಿರಂತರ ಆನೆ ಸಂಚಾರ ಹಾಗೂ ದಾಳಿಯಿಂದಾಗಿ ಈ ಪ್ರದೇಶದ ಕೃಷಿಕರು ನಷ್ಟ ಅನುಭವಿಸುವುದರ ಜೊತೆಗೆ, ಜೀವಭಯದ ನಡುವೆ ದಿನನಿತ್ಯ ಜೀವನ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾತ್ರಿ ಹೊತ್ತಿನಲ್ಲಿ ಮನೆಗಳಿಂದ ಹೊರಬರಲು ಕೂಡ ಹೆದರುವಂತಾಗಿದೆ ಎಂದು ಸ್ಥಳೀಯರು ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ.
ಘಟನೆಯ ಮಾಹಿತಿ ಪಡೆದ ಉಪ್ಪಿನಂಗಡಿ ಉಪ ವಲಯಾರಣ್ಯಾಧಿಕಾರಿ ಯತೀಂದ್ರ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆನೆ ದಾಳಿಯಿಂದ ಉಂಟಾದ ನಷ್ಟದ ಬಗ್ಗೆ ಮಾಹಿತಿ ಸಂಗ್ರಹಿಸಿ, ಸರಕಾರದಿಂದ ದೊರಕುವ ಪರಿಹಾರವನ್ನು ಶೀಘ್ರವಾಗಿ ಒದಗಿಸುವ ಭರವಸೆಯನ್ನು ನೀಡಿದ್ದಾರೆ.






