ಸಭಾಭವನ ಹಕ್ಕಿಗಳ ಗೂಡಿನಂತೆ ಎಲ್ಲರನ್ನೂ ಒಟ್ಟುಗೂಡಿಸಲಿದೆ : ವಿನಯ್ ಕುಮಾರ್ ಸೊರಕೆ
ಏಕತೆ, ಸೇವೆ ಮತ್ತು ನಂಬಿಕೆಯ ಕೇಂದ್ರವಾಗಲಿ :ಬಿಷಪ್ ಲಾರೆನ್ಸ್ ಮುಕ್ಕುಯಿ



ನೆಲ್ಯಾಡಿ: ಶಿರಾಡಿ ಸೈಂಟ್ ಪೀಟರ್ಸ್ ಮತ್ತು ಸೈಂಟ್ ಪೌಲ್ಸ್ ಸಿರಿಯನ್ ಆರ್ಥೊಡೋಕ್ಸ್ ಚರ್ಚ್, ಇವದ ಆಶ್ರಯದಲ್ಲಿ ಸೈಂಟ್ ಪೀಟರ್ಸ್ ಮತ್ತು ಸೈಂಟ್ ಪೌಲ್ಸ್ ಸಭಾಭವನ, ಶಿರಾಡಿಯಲ್ಲಿ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದಿಂದ 50 ಲಕ್ಷ ರೂ. ಹಾಗೂ ಸಂಸ್ಥೆಯ ವತಿಯಿಂದ 50 ಲಕ್ಷ ರೂ. ಸೇರಿ ಒಟ್ಟು 1.05 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಸಭಾಭವನದ ಉದ್ಘಾಟನಾ ಸಮಾರಂಭ ಶನಿವಾರ ನಡೆಯಿತು.
ಮಾಜಿ ಶಾಸಕರು ಪುತ್ತೂರು ಹಾಗೂ ಮಾಜಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಮಾರ್ ಸೊರಕೆ ಅವರು ದೀಪ ಪ್ರಜ್ವಲಿಸುವ ಮೂಲಕ ಸಭಾಭವನವನ್ನು ಉದ್ಘಾಟಿಸಿ ಮಾತನಾಡಿ, “ಈ ಸಭಾಭವನ ಒಂದು ಹಕ್ಕಿಗಳ ಗೂಡಿನಂತಿದ್ದು, ಎಲ್ಲರನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸುವ ಶಕ್ತಿಯಿದೆ. ಇಂತಹ ಸೌಹಾರ್ದದ ಕೇಂದ್ರ ಉದ್ಘಾಟನೆಗೆ ಸಾಕ್ಷಿಯಾಗಿರುವುದು ನನಗೆ ಹೆಮ್ಮೆಯ ಸಂಗತಿ. ಈ ಪ್ರದೇಶದ ಜನರು ಪರಿಶ್ರಮಿಗಳು ಹಾಗೂ ಸ್ನೇಹಪರರು. ನಾನು ಶಾಸಕರಾಗಿದ್ದಾಗ ಶಕ್ತಿ ನೀಡಿದ ಈ ಊರನ್ನು ಎಂದಿಗೂ ಮರೆತೇನು ಸಾಧ್ಯವಿಲ್ಲ” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅತೀವಂದನೀಯ ಮಥ್ಯೂಸ್ ಮೋರ್ ತಿಮೋತಿಯೋಸ್ ಯೆರುಶಲೇಮ್ ಪಾತ್ರಿಯಾರ್ಕಲ್ ವಿಕಾರಿ ವಹಿಸಿ ಸಭಾಭವನ ಉದ್ಘಾಟನೆಯ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಬೆಳ್ತಂಗಡಿ ಧರ್ಮಪ್ರಾಂತ್ಯದ ಮಾಜಿ ಬಿಷಪ್ ಅತೀವಂದನೀಯ ಲಾರೆನ್ಸ್ ಮುಕ್ಕುಯಿ ಅವರು ಮಾತನಾಡಿ, “ಈ ಸಭಾಭವನ ಕೇವಲ ಕಟ್ಟಡವಲ್ಲ; ಇದು ಏಕತೆ, ಸೇವೆ ಮತ್ತು ನಂಬಿಕೆಯ ಸಂಕೇತ. ಇಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮವೂ ಸಮಾಜದಲ್ಲಿ ಶಾಂತಿ, ಸಹಬಾಳ್ವೆ ಮತ್ತು ಪರಸ್ಪರ ಗೌರವವನ್ನು ಬೆಳೆಸಲಿ” ಎಂದು ಆಶಿಸಿದರು.
ವೇದಿಕೆಯಲ್ಲಿ ಪುತ್ತೂರು ಧರ್ಮಪ್ರಾಂತ್ಯ ಬಿಷಪ್ ಅತೀವಂದನೀಯ ಗೀವರ್ಗೀಸ್ ಮೋರ್ ಮಕರಿಯೋಸ್, ಅತೀವಂದನೀಯ ಯಾಕೋಬ್ ಮೋರ್ ಅಂತೋನಿಯೋಸ್, ಕರ್ನಾಟಕ ಸರಕಾರದ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮ ನಿರ್ದೇಶಕ ಪ್ರಶಾಂತ್ ಜತ್ತಣ್ಣ, ಕೆಪಿಸಿಸಿ ಸದಸ್ಯ ಕೃಷ್ಣಪ್ಪ, ಮಾಜಿ ಜಿ.ಪಂ. ಸದಸ್ಯ ಪಿ.ಪಿ. ವರ್ಗೀಸ್, ಸರ್ವೋತ್ತಮ ಗೌಡ, ಮಾಜಿ ಜಿ.ಪಂ. ಅಧ್ಯಕ್ಷೆ ಕೆ.ಟಿ. ವಲ್ಸಮ್ಮ, ಮಾಜಿ ತಾಲೂಕು ಪಂಚಾಯತ್ ಸದಸ್ಯೆ ಆಶಾಲಕ್ಷ್ಮಣ್, ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಉಷಾ ಆಂಚನ್, ಸ್ಥಳೀಯ ಮುಖಂಡ ದಿವಾಕರ ಗೌಡ, ಭೂ ನ್ಯಾಯ ಮಂಡಳಿ ಸದಸ್ಯ ಇಸ್ಮಾಯಿಲ್ ನೆಲ್ಯಾಡಿ, ಉದ್ಯಮಿ ಉದಯ ಕುಮಾರ್ ಉಪಸ್ಥಿತರಿದ್ದರು.
ಸಂಡೆ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥನೆ ಸಲ್ಲಿಸಿದರು. ಶಿರಾಡಿ ಸೈಂಟ್ ಪೀಟರ್ಸ್ ಮತ್ತು ಸೈಂಟ್ ಪೌಲ್ಸ್ ಸಿರಿಯನ್ ಆರ್ಥೊಡೋಕ್ಸ್ ಚರ್ಚ್ ಧರ್ಮಗುರು ರೆ.ಫಾ.ಸೆರಾಫಿಮ್ ಮಂಡುಂಪಾಲ್ ಸ್ವಾಗತಿಸಿದರು. ಜಿಮ್ಸನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು ಸಭಾಭವನ ನಿರ್ಮಾಣಕ್ಕೆ ಸಹಕರಿಸಿದ ದಾನಿಗಳು ಮತ್ತು ಕಾರ್ಯಕರ್ತರನ್ನು ವೇದಿಕೆಯಲ್ಲಿ ಗೌರವಿಸಲಾಯಿತು. ಸಭಾಭವನ ನಿರ್ಮಾಣದ ಉಸ್ತುವಾರಿ ಎಂ.ಕೆ. ಪೌಲೋಸ್, ಕಾರ್ಯದರ್ಶಿ ಜೈನ್ ಜಾನ್, ಟ್ರಸ್ಟಿ ಅಬ್ರಾಹಂ ಪಿ.ಪಿ., ಚರ್ಚ್‌ನ ಟ್ರಸ್ಟಿಗಳು, ಕಾರ್ಯದರ್ಶಿ ಹಾಗೂ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.






