ಹಳ್ಳಿಯ ಮಕ್ಕಳಿಗೂ ನಗರಮಟ್ಟದ ನವೀನ ಶಿಕ್ಷಣ – ಶಾಸಕಿ ಭಾಗೀರಥಿ ಮುರುಳ್ಯ



ನೆಲ್ಯಾಡಿ: ಕಡಬ ತಾಲೂಕಿನ ನೆಲ್ಯಾಡಿಯ ಜ್ಞಾನೋದಯ ಬೆಥನಿ ಪಿಯು ಕಾಲೇಜು ಆವರಣದಲ್ಲಿ ಮಕ್ಕಳ ಸರ್ವಾಂಗೀಣ ಬೆಳವಣಿಗೆಯನ್ನು ಗುರಿಯಾಗಿಟ್ಟುಕೊಂಡು ಕೆಜಿ ವಿಭಾಗಕ್ಕಾಗಿ ಸ್ಥಾಪಿಸಲಾದ ‘ಕ್ರೀಡೋ ಲ್ಯಾಬ್’ ಉದ್ಘಾಟನಾ ಕಾರ್ಯಕ್ರಮ ಮಂಗಳವಾರದಂದು ನಡೆಯಿತು.

ಕಾರ್ಯಕ್ರಮವನ್ನು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರು ಉದ್ಘಾಟಿಸಿ ಮಾತನಾಡಿ, “ನೆಲ್ಯಾಡಿಯಂತಹ ಗ್ರಾಮೀಣ ಪ್ರದೇಶದಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ವಿಶೇಷ ಒತ್ತು ನೀಡಿ, ನಗರಗಳಲ್ಲಿ ದುಬಾರಿ ವೆಚ್ಚದಲ್ಲಿ ಲಭ್ಯವಾಗುವಂತಹ ಆಧುನಿಕ ಶಿಕ್ಷಣ ವ್ಯವಸ್ಥೆಯನ್ನು ಇಲ್ಲಿಯೇ ಒದಗಿಸಿರುವುದು ಅತ್ಯಂತ ಹೆಮ್ಮೆಯ ಸಂಗತಿ. ನೂತನ ಕಲ್ಪನೆಗಳೊಂದಿಗೆ ರೂಪಿಸಲಾದ ಈ ಶಿಕ್ಷಣ ವಿಧಾನವು ಮಕ್ಕಳ ಪ್ರಗತಿಗೆ ಪೂರಕವಾಗಿದ್ದು, ಮುಂದಿನ ದಿನಗಳಲ್ಲಿ ಹಳ್ಳಿಯ ಮಕ್ಕಳೂ ಉನ್ನತ ವ್ಯಾಸಂಗ ಸಾಧಿಸುವಂತಾಗಲಿ” ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಸಂಚಾಲಕರು ಹಾಗೂ ಪ್ರಾಂಶುಪಾಲರಾದ ಡಾ.ವರ್ಗೀಸ್ ಕೈಪನಡ್ಕ ಮಾತನಾಡಿ, “ಮಕ್ಕಳಲ್ಲಿ ಸೃಜನಶೀಲತೆ, ಚಿಂತನಾ ಸಾಮರ್ಥ್ಯ, ಚಲನ ಕೌಶಲ್ಯ ಹಾಗೂ ಕಲಿಕೆಯ ಮೇಲಿನ ಆಸಕ್ತಿಯನ್ನು ಬೆಳೆಸುವ ಉದ್ದೇಶದಿಂದ ‘ಕ್ರೀಡೋ ಲ್ಯಾಬ್’ ಅನ್ನು ರೂಪಿಸಲಾಗಿದೆ. ಇದು ಆಧುನಿಕ ಕಲಿಕಾ ಸೌಲಭ್ಯಗಳನ್ನು ಒಳಗೊಂಡಿದ್ದು, ಶಿಕ್ಷಣ ಕ್ಷೇತ್ರದಲ್ಲಿ ನವೀನ ಪ್ರಯೋಗಗಳ ಮೂಲಕ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಜ್ಞಾನೋದಯ ಬೆಥನಿ ಪಿಯು ಕಾಲೇಜು ಸದಾ ಮುಂಚೂಣಿಯಲ್ಲಿದೆ. ಬೆಥನಿ ವಿದ್ಯಾ ಸಂಸ್ಥೆ ಗುಣಮಟ್ಟದ ಪ್ರಾಕ್ಟಿಕಲ್ ಶಿಕ್ಷಣ ನೀಡಲು ಹೆಚ್ಚಿನ ಒತ್ತು ನೀಡುತ್ತಿದೆ” ಎಂದು ಹೇಳಿದರು.
ಈ ಸಂದರ್ಭ ಮ್ಯಾಗ್ ಕ್ರಿಸ್ಟೋಫ್ ಎಡರ್, ಹೆರ್ ಅಂಟನ್ ಮೊಬ್ ಹ್ಯಾಮರ್, ಡಾ. ಸೆಬಾಸ್ಟಿಯನ್ ಎಡರ್, ನೆಲ್ಯಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸಲಾಂ ಬಿಲಾಲ್, ಗ್ರಾಮ ಪಂಚಾಯತ್ ಸದಸ್ಯ ಅಬ್ದುಲ್ ಜಬ್ಬಾರ್, ಸಂಸ್ಥೆಯ ಕೋಶಾಧಿಕಾರಿ ಫಾ.ಸಾಮ್ಯುಯಲ್ ಜಾರ್ಜ್, ಉದ್ಯಮಿ ಪೌಲ್ ಡಿಸೋಜಾ, ಶಿಕ್ಷಕ-ರಕ್ಷಕ ಸಂಘದ ಸದಸ್ಯೆ ಪ್ರೆಸ್ಸಿ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.






