

ನೆಲ್ಯಾಡಿ: ಇ.ಎ.ಇ. ದಕ್ಷಿಣ ಕನ್ನಡ ವಲಯದ 14ನೇ ಬೈಬಲ್ ಕನ್ವೆನ್ಷನ್ ಕಾರ್ಯಕ್ರಮವು ನೆಲ್ಯಾಡಿ ಗಾಂಧಿ ಮೈದಾನದಲ್ಲಿ ಭಕ್ತಿಭಾವ ಹಾಗೂ ಆಧ್ಯಾತ್ಮಿಕ ವಾತಾವರಣದೊಂದಿಗೆ ನಡೆಯಿತು.
ಕನ್ವೆನ್ಷನ್ ಅನ್ನು ಇ.ಎ.ಇ. ಧರ್ಮಾಧ್ಯಕ್ಷ ಅತಿ ವಂ.ಬಿಷಪ್ ಮಾರ್ಕೊಸ್ ಮಾರ್ ಕ್ರಿಸೆಷ್ಟೋಮೋಸ್ ಅವರು ಉದ್ಘಾಟಿಸಿ ಮಾತನಾಡಿ, ಪ್ರಪಂಚದಲ್ಲಿ ನಡೆಯುತ್ತಿರುವ ಅನೇಕ ಸಮಸ್ಯೆಗಳಿಗೆ ಪರಸ್ಪರ ವಿನಯ, ಸಹನಶೀಲತೆ ಮತ್ತು ಸೌಹಾರ್ದದಿಂದ ಬದುಕುವುದೇ ಶಾಶ್ವತ ಪರಿಹಾರವೆಂದು ಹೇಳಿದರು. ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದವನ್ನು ಕಾಪಾಡಿಕೊಳ್ಳಬೇಕೆಂದು ಅವರು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇ.ಎ.ಇ.ಯ ಕಾರ್ಯದರ್ಶಿ ಫಾ. ತಂಗಚನ್ ವರ್ಗಿಸ್ ಅವರು ವಹಿಸಿದ್ದರು. ಮುಖ್ಯ ಅತಿಥಿಯಾಗಿ ವಂ.ಪೌಲೋಸ್ ಪಾರೇಕರ ಕೊರ ಎಪಿಸ್ಕೋಪ್ ಅವರು ಉಪಸ್ಥಿತರಿದ್ದು, ಸಂದೇಶ ನೀಡಿ ಎಲ್ಲರನ್ನೂ ಹರಸಿ ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ವಂ.ಜಾನ್ ವರ್ಗಿಸ್ ಕೋರ್ ಎಪಿಸ್ಕೋಪ್, ಫಾ.ಯೋಹಾನ್ನನ್ ಟಿ.ಜಿ., ಫಾ.ಜೇಕಬ್ ತೋಮಸ್, ಫಾ.ನೋಮಿಸ್ ಕುರಿಯಾಕೋಸ್, ಫಾ. ಅನೀಶ್ ಪಾರಾಶೇರಿಲ್, ಡಿಕನ್ ಎಲ್ದೊ, ಖಜಾಂಜಿ ಬೆನ್ನಿ.ಕೆ.ಕೆ., ಕಾರ್ಯದರ್ಶಿ ಮಧು ಎ.ಜೆ. ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
14ನೇ ಬೈಬಲ್ ಕನ್ವೆನ್ಷನ್‌ನ ಕನ್ವಿನರ್ ವಂ.ಕುರಿಯಾಕೋಸ್ ಕವನಾಟೇಲ್ ಕೋರ್ ಎಪಿಸ್ಕೋಪ್ ಅವರು ಸ್ವಾಗತಿಸಿ, ವಂ.ಪಿ.ಕೆ.ಅಬ್ರಹಾಂ ಕೋರ್ ಎಪಿಸ್ಕೋಪ್ ವಂದನಾರ್ಪಣೆ ಸಲ್ಲಿಸಿದರು. ಫಾ.ವಿಲ್ಸನ್ ಮತ್ತಾಯಿ ನಿರೂಪಸಿದರು.





