



ನೆಲ್ಯಾಡಿ: ಭಾರತದಲ್ಲಿ ಜನಿಸಿದ್ದಕ್ಕೆ ನಾವು ನಿಜಕ್ಕೂ ಧನ್ಯರು. ಇಡೀ ಕುಟುಂಬವೇ ನಮ್ಮ ದೇಶ, ತನ್ನಿಗೇನೂ ಅಪೇಕ್ಷಿಸದೆ ಸಮಾಜಕ್ಕಾಗಿ ಬದುಕಿರುವುದು ಈ ನಾಡಿನ ಪರಂಪರೆ. ಜಗತ್ತಿಗೆ ಜ್ಞಾನವನ್ನು ಬೆಳಗಿದ್ದೂ ಈ ಭಾರತವೇ. ಎಲ್ಲರನ್ನು ಒಗ್ಗೂಡಿಸುವ ಹಿಂದುತ್ವ ಎನ್ನುವ ಮೂಲ ಮಂತ್ರವೇ ಈ ದೇಶದ ನಡವಳಿಕೆಯ ಹೃದಯ. ತನ್ನಿಗಾಗಲಿ, ತನ್ನ ಸಂಘಟನೆಗಾಗಲಿ ಲಾಭ ಬಂದರೂ ಅದನ್ನು ತಿರಸ್ಕರಿಸಿ ದೇಶ-ಧರ್ಮ-ಸಮಾಜಕ್ಕಾಗಿ ಸೇವೆ ಸಲ್ಲಿಸಿದ ಸಾಧುಸಂತರು, ಮಹಾನುಭಾವರು ಬದುಕಿದ ಭೂಮಿ ಭಾರತ. ಪ್ರಪಂಚದ ಬೇರೆ ದೇಶಗಳಂತೆ ಬೇರೆಯವರ ಮೇಲೆ ಆಕ್ರಮಣ ಮಾಡದೆ, ಜ್ಞಾನ, ಶಾಂತಿ ಹಾಗೂ ಮಾನವತೆಯನ್ನು ಕೊಟ್ಟ ರಾಷ್ಟ್ರವೆಂದರೆ ಅದು ಭಾರತ ಮಾತ್ರ. ಈ ದೇಶದ ಅಸ್ಮಿತೆ, ಈ ದೇಶದ ಐಡೆಂಟಿಟಿ ಹಿಂದುತ್ವದಲ್ಲಿದೆ. ಹಿಂದುತ್ವ ಮತ್ತು ಭಾರತವನ್ನು ಬೇರೆ ಬೇರೆ ಎಂದು ನೋಡುವುದೇ ಸಾಧ್ಯವಿಲ್ಲ. ಹಿಂದುತ್ವ ಅಂದರೆ ಭಾರತ, ಭಾರತ ಅಂದರೆ ಹಿಂದುತ್ವ ಎಂದು ಡಾ.ರವಿ ಹೇಳಿದರು.

ನೆಲ್ಯಾಡಿ ಗಾಂಧಿ ಮೈದಾನದಲ್ಲಿ ನಡೆದ ಕಡಬ ತಾಲೂಕು ಹಿಂದೂ ಸಂಗಮ ಆಯೋಜನ ಸಮಿತಿ ನೆಲ್ಯಾಡಿ ಮಂಡಲ ಭಾನುವಾರ ಆಯೋಜಿಸಿದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.

ಹಿಂದು ಎಂಬುದನ್ನು ಕೇವಲ ‘ಮತ’ಕ್ಕೆ ಸೀಮಿತಗೊಳಿಸಿದರೂ, ವಾಸ್ತವವಾಗಿ ಹಿಂದು ಧರ್ಮವೆಂದರೆ ಒಂದು ಜೀವನ ಪದ್ಧತಿ. ಮತ ಮತ್ತು ಧರ್ಮ ಇಬ್ಬರಲ್ಲೂ ವ್ಯತ್ಯಾಸ ಇದೆ; ಧರ್ಮ ಎನ್ನುವುದು ಅನುಷ್ಠಾನಗೊಂಡಾಗ ಅದು ಸಂಸ್ಕೃತಿಯಾಗಿ ಬೆಳೆಯುತ್ತದೆ. ಇಂತಹ ಸಂಸ್ಕೃತಿಯೇ ಈ ನಾಡಿನ ಜನರ ಮನಸ್ಸಿನಲ್ಲಿ ಭಾವನೆ, ಜವಾಬ್ದಾರಿ, ಕುಟುಂಬ ಪದ್ಧತಿ ಹಾಗೂ ಮೌಲ್ಯಗಳ ನಿರ್ಮಾಣ ಮಾಡುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ನಾವು ಈ ಸಂಸ್ಕೃತಿಯನ್ನು ಕಳೆದುಕೊಳ್ಳುತ್ತಿದ್ದೇವೆ. ದೇಶ ಇಷ್ಟೊಂದು ಸಮೃದ್ಧವಾಗಿರುವ ಮುಖ್ಯ ಕಾರಣವೇ ಈ ಹಿಂದೂ ಸಂಸ್ಕೃತಿ. ಆದ್ದರಿಂದ ಇದನ್ನು ಉಳಿಸುವುದು ಪ್ರತಿಯೊಬ್ಬರ ಕರ್ತವ್ಯ. ಭಾರತ ಪುನಃ ವಿಶ್ವಗುರುವಾಗಬೇಕೆಂದು ರಾಷ್ಟ್ರೀಯ ಸ್ವಯಂಸೇವಕ ಸಂಘವು ಶತಮಾನದಿಂದ ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರ ನಿರ್ಮಾಣದ ಕಾರ್ಯ ನಿರ್ವಹಿಸುತ್ತಿದೆ. ಅದರ ತಾತ್ಪರ್ಯವನ್ನು ನೆನಪಿಗೆ ತರಲು, ಸಂಸ್ಕೃತಿ ಉಳಿಸಿ ಜಾಗೃತಿ ಮೂಡಿಸಲು ಹಿಂದೂ ಸಂಗಮವನ್ನು ಆಯೋಜಿಸಲಾಗುತ್ತಿದೆ. ಮನುಷ್ಯನನ್ನು ಮನುಷ್ಯತ್ವದಿಂದ ಮಾಧವತ್ವದ ದಿಕ್ಕಿಗೆ ನಡೆಸುವುದು — ಅದೇ ನಿಜವಾದ ಹಿಂದೂ ಧರ್ಮ ಎಂದು ಹೇಳಿದರು.

ಬೆಂಗಳೂರು ಸತ್ಯಸಾಯಿ ಆಸ್ಪತ್ರೆಯ ನಿವೃತ್ತ ಸಹಾಯಕ ಕಾರ್ಯನಿರ್ವಹಣಾಧಿಕಾರಿ ವಸಂತಿ ರುಕ್ಮಯ್ಯ ಗೌಡ ದಗ್ಗೋಡಿ ಅವರು ಮಾತನಾಡಿ, “ಈ ಹಿಂದೂ ಸಂಗಮವು ಆರ್.ಎಸ್.ಎಸ್ ಸ್ವಯಂಸೇವಕರ ಶ್ರಮ ಮತ್ತು ಸಂಘಟನೆಯ ಫಲ. ‘ಹಿಂದೂ’ ಎಂದರೆ ಏನು ಎಂದು ಅರಿಯುವುದು ಪ್ರತಿಯೊಬ್ಬರ ಕರ್ತವ್ಯ. ವಿಶ್ವದಲ್ಲೇ ಅತಿ ದೊಡ್ಡ ಧರ್ಮ ಹಿಂದೂ ಧರ್ಮ; ನಾವು ಧರ್ಮವನ್ನು ಕಾಯ್ದುಕೊಂಡರೆ ಧರ್ಮವೇ ನಮ್ಮನ್ನು ರಕ್ಷಿಸುತ್ತದೆ. ದೇಶದ ಹಿತಕ್ಕಾಗಿ, ಹಿಂದೂ ಸಮಾಜವನ್ನು ಉಳಿಸಿಕೊಳ್ಳಲು ಎಲ್ಲರೂ ಒಂದಾಗಿ ಬರಬೇಕು. ಮಕ್ಕಳಿಗೆ ಬಾಲ್ಯದಲ್ಲೇ ಸಂಸ್ಕಾರ, ಆಚಾರ–ವಿಚಾರಗಳನ್ನು ತಿಳಿಸಿಕೊಡುವುದು ಅತ್ಯಂತ ಮುಖ್ಯ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಟ್ಲಡ್ಕ ಶ್ರೀ ಗಡಿಯಾಡಿ ಆದಿಮೊಗೇರ್ಕಳ ಸ್ವಾಮಿ ಕೊರಗಜ್ಜ ಮತ್ತು ಪರಿವಾರ ದೈವಗಳ ದೇವಸ್ಥಾನದ ಉಪಾಧ್ಯಕ್ಷ ಹರೀಶ್ ಪಟ್ಟಡ್ಕ ವಹಿಸಿದ್ದರು.
ದೋಂತಿಲ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಸುಬ್ರಹ್ಮಣ್ಯ ಬಾಳ್ತಿಲ್ಲಾಯ, ಪಡುಪೆಟ್ಟು ಶ್ರೀ ವಿಷ್ಣುಮೂರ್ತಿ ದೇವಳದ ಆಡಳಿತ ಮೊಕ್ತೇಸರ ಡಾ.ಸುಬ್ರಹ್ಮಣ್ಯ ಶಬರಾಯ, ಇಚ್ಲಂಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಳದ ಅಧ್ಯಕ್ಷ ಜಯರಾಜ್ ಕೊರಮೇಲು, ಕೋಣಾಲು ಶ್ರೀ ವಿಷ್ಣುಮೂರ್ತಿ ದೇವಳದ ಆಡಳಿತ ಮೊಕ್ತೇಸರ ಮಾಧವ ಸರಳಾಯ, ಕಾವು-ಕೌಕ್ರಾಡಿ ಶ್ರೀ ತ್ರಿಗುಣಾತ್ಮಕ ದುರ್ಗಾಪರಮೇಶ್ವರಿ ದೇವಳದ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ನೆಲ್ಯಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಳದ ಅಧ್ಯಕ್ಷ ರವಿಚಂದ್ರ ಹೊಸವಕ್ಲು, ಕುತ್ತಾಡಿ ಹಾರ್ಪಳ ಶ್ರೀ ಶಾಸ್ತಾರೇಶ್ವರ ದೇವಸ್ಥಾನ ಅಧ್ಯಕ್ಷ ಸುಂದರ ಗೌಡ ಅತ್ರಿಜಾಲು, ಮಾದೇರಿ ಶಬರಿಗಿರಿ ಶ್ರೀ ಅಯ್ಯಪ್ಪ ಸ್ವಾಮಿ ದೇವಳದ ಅಧ್ಯಕ್ಷ ಶಿವರಾಮ ಗೌಡ ಕೊರಡೇಲು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ವಿಷ್ಣು ಸಹಸ್ರನಾಮ ಪಠಣ, ಕುಣಿತ ಭಜನೆ, ನೆಲ್ಯಾಡಿ ಶ್ರೀರಾಮ ವಿದ್ಯಾಲಯದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಶ್ರೀ ವರಮಹಾಲಕ್ಷ್ಮಿ ಮಾತೃ ಭಜನಾ ಮಂಡಳಿ ಸೂರ್ಯನಗರ-ನೆಲ್ಯಾಡಿ ಇವರಿಂದ ನೃತ್ಯ ಕಾರ್ಯಕ್ರಮ ನಡೆಯಿತು. ಬಳಿಕ ನಂದಿ ಪೂಜೆ, ಗೋಪೂಜೆ, ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಲಾಯಿತು.
ಶ್ರೀರಾಮ ವಿದ್ಯಾಸಂಸ್ಥೆಯ ಮಾತಾಜಿಯವರು ಪ್ರಾರ್ಥಿಸಿದರು. ರವಿಪ್ರಸಾದ್ ಶೆಟ್ಟಿ ಬಲ್ಯ ಸ್ವಾಗತಿಸಿದರು. ಸುಪ್ರೀತಾ ರವಿಚಂದ್ರ ವಂದಿಸಿದರು. ಶೀನಪ್ಪ ಬರಮೇಲು ಹಾಗೂ ಸುರೇಶ್ ಪಡಿಪಂಡ ನಿರೂಪಿಸಿದರು.ಕಾರ್ಯಕ್ರಮದ ಕೊನೆಗೆ ಶ್ರೀರಾಮ ಶಾಲಾ ವಿದ್ಯಾರ್ಥಿಗಳಿಂದ ಶಾಂತಿಮಂತ್ರ ಪಠಣ ನಡೆಯಿತು.





