



ನೆಲ್ಯಾಡಿ: ನೆಲ್ಯಾಡಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಇತ್ತೀಚೆಗೆ ಸಂಚಾರ ನಿಯಂತ್ರಕರು ನೇಮಕಗೊಂಡಿದ್ದರೂ, ದಿನದ 24 ಗಂಟೆಗಳೂ ಸಂಚಾರ ನಿಯಂತ್ರಕರ ಹಾಜರಾತಿ ಅಗತ್ಯವೆಂದು ಸಾರ್ವಜನಿಕರು ಈ ಸಂಬಂಧ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ರಾತ್ರಿ ವೇಳೆಯಲ್ಲಿ ಮಂಗಳೂರು ಮತ್ತು ಬೆಂಗಳೂರು ಮಾರ್ಗದ ಬಸ್‌ಗಳು ಬಹುತೇಕ ಬಸ್ ನಿಲ್ದಾಣಕ್ಕೆ ಪ್ರವೇಶಿಸದೆ ಮುಖ್ಯರಸ್ತೆಯಲ್ಲೇ ಸಂಚಾರ ನಡೆಸುತ್ತಿರುವುದರಿಂದ, ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತಿದೆ ಎಂದು ಸಾರ್ವಜನಿಕರು ದೂರಿದರು. ವಿಶೇಷವಾಗಿ ವೃದ್ಧರು, ಮಹಿಳೆಯರು ಮತ್ತು ದೂರ ಪ್ರಯಾಣಿಕರು ರಾತ್ರಿ ವೇಳೆಯಲ್ಲಿ ಸುರಕ್ಷಿತವಾಗಿ ಬಸ್‌ಗೆ ಏರಲು ನಿಲ್ದಾಣದೊಳಗೆ ಬಸ್‌ಗಳು ಬರುವಂತೆ ಶಾಶ್ವತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಯಿತು.
ಇದೇ ಸಂದರ್ಭದಲ್ಲಿ, ಬಸ್ ನಿಲ್ದಾಣದ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿವೈಡರ್ ಅಳವಡಿಸಿಲ್ಲವೆಂಬ ಸಮಸ್ಯೆಯನ್ನು ಕೂಡ ಸಾರ್ವಜನಿಕರು ತಿಳಿಸಿದರು. ಬಸ್ ನಿಲ್ದಾಣ ಪ್ರವೇಶ ಮತ್ತು ನಿರ್ಗಮನದ ಸಮಯದಲ್ಲಿ ಅತಿದೊಡ್ಡ ಅಸ್ತವ್ಯಸ್ತತೆ ಮತ್ತು ಅಪಘಾತ ಭೀತಿ ಇರುವುದರಿಂದ ತ್ವರಿತವಾಗಿ ಡಿವೈಡರ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಅವರು ಕೇಳಿಕೊಂಡರು.
ಸಂತ ಜಾರ್ಜ್ ವಿದ್ಯಾಸಂಸ್ಥೆ ಬಳಿ ಬಸ್ಸು ನಿಲುಗಡೆಗೆ ಮನವಿ:
ನೆಲ್ಯಾಡಿ ಸಂತ ಜಾರ್ಜ್ ವಿದ್ಯಾಸಂಸ್ಥೆಯ ಬಳಿ ಶಾಲಾ ಮಕ್ಕಳ ಸುರಕ್ಷತೆ ಮತ್ತು ಸೌಕರ್ಯಕ್ಕಾಗಿ ಎಲ್ಲಾ ಬಸ್ಸುಗಳ ನಿಲುಗಡೆಗೆ ಕ್ರಮ ಜರುಗಿಸಬೇಕೆಂದು ಸಂಸ್ಥೆಯ ಆಡಳಿತ ಮಂಡಳಿ ಕೆಎಸ್‌ಆರ್‌ಟಿಸಿಗೆ ಮನವಿ ಮಾಡಿದೆ.
ಸಂತ ಜಾರ್ಜ್ ಪ.ಪೂ. ಕಾಲೇಜಿನ ಪ್ರಾಂಶುಪಾಲ ಏಲಿಯಾಸ್ ಎಂ.ಕೆ., ಪ್ರೌಢಶಾಲಾ ಕನ್ನಡ ಮಾಧ್ಯಮ ವಿಭಾಗದ ಮುಖ್ಯಶಿಕ್ಷಕ ಎಂ.ಐ. ತೋಮಸ್ ಅವರು ಕೆಎಸ್‌ಆರ್‌ಟಿಸಿ ಪುತ್ತೂರು ಡಿಪೋ ಮೇನೇಜರ್ ಸುಬ್ರಹ್ಮಣ್ಯ ಪ್ರಕಾಶ್ ಅವರಿಗೆ ಮನವಿ ಸಲ್ಲಿಸಿ, “ಸಾವಿರಾರು ವಿದ್ಯಾರ್ಥಿಗಳು ನಿತ್ಯ ಸಂಚಾರ ಮಾಡುತ್ತಿದ್ದಾರೆ. ಎಲ್ಲ ಬಸ್‌ಗಳ ನಿಲುಗಡೆ ಇದ್ದರೆ ಮಕ್ಕಳಿಗೆ ಸುರಕ್ಷಿತವಾಗಿ ಶಾಲೆಗೆ ಬರಲು ಹೋಗಲು ಸೌಲಭ್ಯ ದೊರೆಯುತ್ತದೆ” ಎಂದು ಹೇಳಿದರು.
ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಶರತ್, ತಾ.ಪಂ.ಸಹಾಯಕ ನಿರ್ದೇಶಕ ಯಶವಂತ ಬೆಳ್ಚಡ, ಸುಳ್ಯ ವಿಧಾನಸಭಾ ಕ್ಷೇತ್ರದ ಅಕ್ರಮ ಸಕ್ರಮ ಸಮಿತಿ ಸದಸ್ಯ ಪಿ.ಪಿ.ವರ್ಗೀಸ್, ಕಡಬ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರಾದ ಗಂಗಾಧರ ಶೆಟ್ಟಿ ಹೊಸಮನೆ, ಸತೀಶ್ ಪಳಿಕೆ, ಭವಾನಿಶಂಕರ ಗೌಡ, ಮಾಧವ ಪೂಜಾರಿ, ಬಶೀರ್ ಆತೂರು, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಭಿಲಾಷ್ ಪಿ.ಕೆ., ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಸಲಾಂ ಬಿಲಾಲ್, ಕೌಕ್ರಾಡಿ ಗ್ರಾ.ಪಂ.ಅಧ್ಯಕ್ಷ ಉದಯಕುಮಾರ್, ಸದಸ್ಯರಾದ ಕೆ.ಎಂ.ಹನೀಫ್, ಲೋಕೇಶ್ ಬಾಣಜಾಲು, ನೆಲ್ಯಾಡಿ -ಕೌಕ್ರಾಡಿ ವರ್ತಕ ಹಾಗೂ ಕೈಗಾರಿಕಾ ಸಂಘದ ಅಧ್ಯಕ್ಷ ಸತೀಶ್ ಕೆ ಎಸ್ ದುರ್ಗಶ್ರೀ, ನಿವೃತ್ತ ಮುಖ್ಯಶಿಕ್ಷಕ ರವೀಂದ್ರ ಟಿ., ಕೆಎನ್‌ಆರ್ ಕಂಪನಿಯ ರಂಗಸ್ವಾಮಿ, ಸ್ಥಳೀಯ ಗ್ರಾಮಸ್ಥರು ಉಪಸ್ಥಿತರಿದ್ದರು.





